×
Ad

"ಎನ್‌ಜಿಒ ಹೆಸರಿನಲ್ಲಿ ಬಂದ ಪತ್ರಕರ್ತರು ಹಿಡನ್‌ ಕ್ಯಾಮರಾದಲ್ಲಿ ನನ್ನ ಅಜ್ಜಿ, ಅಣ್ಣನ ವೀಡಿಯೋ ಮಾಡಿದ್ದಾರೆ"

Update: 2022-02-20 22:38 IST

ಉಡುಪಿ, ಫೆ.20: ಹಿಜಾಬ್ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯ ರಲ್ಲಿ ಒಬ್ಬರಾದ ಆಲಿಯಾ ಅಸ್ಸಾದಿ, ಮಾಧ್ಯಮಗಳು ತಮ್ಮ ಮಿತಿಯನ್ನು ದಾಟಿ ಬಲವಂತವಾಗಿ ನಮ್ಮ ಮನೆಯೊಳಗೆ ಪ್ರವೇಶಿಸಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ.

‘ಖಾಸಗಿತನ ಪದದ ಅರ್ಥವನ್ನು ಮಾಧ್ಯಮದವರು ನೆನಪಿಡಬೇಕು. ಆದರೆ ಅವರು ಮಾಧ್ಯಮದ ಧರ್ಮವನ್ನೇ ಮರೆತಿದ್ದಾರೆ. ಹಿಡನ್ ಕ್ಯಾಮೆರಾಗಳನ್ನು ಹಿಡಿದುಕೊಂಡು ನನ್ನ ಮನೆಗೆ ಬಲವಂತವಾಗಿ ಪ್ರವೇಶಿಸಿದ್ದಾರೆ. ಈ ಮೂಲಕ ಏಶ್ಯನೆಟ್‌ ಸುವರ್ಣ ನ್ಯೂಸ್ ಮಾಧ್ಯಮ ತಮ್ಮ ಮಿತಿಯನ್ನು ಮೀರಿದೆ’ ಎಂದು ಆಲಿಯಾ ಅಸ್ಸಾದಿ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ವಾರ್ತಾಭಾರತಿ ಜೊತೆ ಮಾತನಾಡಿದ ಆಲಿಯಾ ಅಸ್ಸಾದಿ, "ಮೂರು ನಾಲ್ಕು ದಿನಗಳ ಹಿಂದೆ ಎನ್‌ಜಿಓ ಎಂದು ಹೇಳಿಕೊಂಡು ಕೆಲವರು ನಮ್ಮ ಮನೆಗೆ ಬಂದಿದ್ದರು. ಯಾವುದೇ ಅನುಮತಿ ಕೇಳದೆ ನೇರವಾಗಿ ಮನೆಯೊಳಗೆ ಬಂದು, ತಮ್ಮಲ್ಲಿದ್ದ ಹಿಡನ್ ಕ್ಯಾಮೆರಾದಿಂದ ನನ್ನ ಅಜ್ಜಿ ಮತ್ತು ಸಹೋದರನ ವಿಡಿಯೋ ಮಾಡಿದ್ದಾರೆ ಎಂದು ದೂರಿದರು.ಇವರ ಬಳಿ ಹಿಡನ್ ಕ್ಯಾಮೆರಾ ಇರುವುದು ನಮಗೆ ಯಾರಿಗೂ ಗೊತ್ತೆ ಇರಲಿಲ್ಲ. ಇವರು ಬರುವಾಗ ನಾನು ಮನೆಯಲ್ಲಿ ಇರಲಿಲ್ಲ. ನನ್ನ ಅಣ್ಣ, ಅವರಿಗೆ ಮನೆಯೊಳಗೆ ಬರಬೇಡಿ ಎಂದು ಹೇಳಿದರೂ ಬಲವಂತವಾಗಿ ಒಳಗೆ ಪ್ರವೇಶಿಸಿದ್ದಾರೆ. ಒಳಗೆ ಬಂದು ನಮಗೆ ಆಲಿಯಾ ಅಸ್ಸಾದಿ ದೊತೆ ಮಾತನಾಡ ಬೇಕು ಎಂದು ಹೇಳಿದ್ದಾರೆ. ನಾನು ಮನೆಯಲ್ಲಿ ಇರದಕ್ಕೆ ನನಗೆ ಕಾಲ್ ಮಾಡಿ ಮಾತನಾಡಿದ್ದಾರೆ. ಆದರೆ ನಾನು ಹೊರಗಡೆ ಇದ್ದೇನೆ ಮಾತನಾಡುವುದಿಲ್ಲ ಎಂದು ಹೇಳಿದ್ದೆ ಎಂದು ಅವರು ವಿವರಿಸಿದರು.

ಇವರೆಲ್ಲ ಮಾಧ್ಯಮದವರು ಎಂದು ನಮಗೆ ಗೊತ್ತೆ ಇರಲಿಲ್ಲ. ಹೀಗೆ ವಿಡಿಯೋ ಮಾಡಿಕೊಂಡು ಹೋಗಿ ಇವತ್ತು ಟಿವಿಯಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಡದ ನನ್ನ ಅಜ್ಜಿ ಮತ್ತು ಅಣ್ಣನನ್ನು ಇವರು ಯಾಕೆ ವಿಡಿಯೋ ಮಾಡಿ ಹಾಕುತ್ತಾರೆ. ಇವರಿಗೆ ಖಾಸಗಿತನ, ಗೌಪ್ಯತೆ ಎಂಬುದರ ಅರ್ಥಗೊತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಈ ರೀತಿ ತಮ್ಮ ಮಿತಿಯನ್ನು ಮೀರಿರುವ ಮಾಧ್ಯಮದ ವಿರುದ್ಧ ದೂರು ನೀಡಲಾಗುವುದು. ಈ ಬಗ್ಗೆ ನನ್ನ ಹೆತ್ತವರ ಜೊತೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು. ‘ನನ್ನ ಕಾಲೇಜಿನ ದಾಖಲೆಗಳನ್ನು ಸೋರಿಕೆ ಮಾಡಿದ ಬಳಿಕ ನನಗೆ ಹಲವು ಬೆದರಿಕೆ ಕರೆಗಳು ಬಂದಿವೆ. ಅದಕ್ಕಾಗಿ ನಾನು ನನ್ನ ಹಳೆಯ ಸಿಮ್ ತೆಗೆದು ಬೇರೆ ಸಿಮ್ ಹಾಕಿಕೊಂಡಿದ್ದೇನೆ’ ಎಂದರು.

ಹಿಜಾಬ್ ಸಂಬಂಧಿಸಿ ಹೈಕೋರ್ಟ್ ಅಂತಿಮ ಆದೇಶ ಬರುವವರೆಗೆ ನಾವು ಕಾಲೇಜಿಗೆ ಬರುವುದಿಲ್ಲ. ಕಾಲೇಜು ಪುನಾರಂಭಗೊಂಡ ಬಳಿಕ ನಾವು ಆರು ಮಂದಿ ಯಾರು ಕೂಡ ಕಾಲೇಜಿಗೆ ಹೋಗಿಲ್ಲ. ಸದ್ಯ ಪರೀಕ್ಷೆ ಹಿನ್ನೆಲೆಯಲ್ಲಿ ನಾವು ಮನೆಯಲ್ಲಿಯೇ ಕುಳಿತು ಓದುತ್ತಿದ್ದೇವೆ. ಯೂಟ್ಯೂಬ್ ಸಹಾಯದಿಂದ ಅಧ್ಯಯನ ಮಾಡುತ್ತಿದ್ದೇವೆ ಎಂದು ಆಲಿಯಾ ಅಸ್ಸಾದಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News