ಉಕ್ರೇನ್ ಮೇಲೆ ರಶ್ಯಾ ಆಕ್ರಮಣದ ಭೀತಿ ಹೆಚ್ಚಳ: ಉನ್ನತ ಮಟ್ಟದ ಸಮಿತಿಯ ತುರ್ತು ಸಭೆ ಕರೆದ ಬೈಡನ್
ವಾಷಿಂಗ್ಟನ್, ಫೆ.20: ಉಕ್ರೇನ್ ಗಡಿಭಾಗದಲ್ಲಿ ಜಮಾವಣೆಗೊಂಡಿರುವ ರಶ್ಯಾದ ಪಡೆ ಯಾವುದೇ ಕ್ಷಣದಲ್ಲಿ ಆಕ್ರಮಣ ಎಸಗಲು ಸನ್ನದ್ಧ ಸ್ಥಿತಿಯಲ್ಲಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಮ್ಮ ಉನ್ನತ ಸಲಹೆಗಾರರ ಸಭೆ ಕರೆದಿದ್ದಾರೆ ಎಂದು ವರದಿಯಾಗಿದೆ.
ರಶ್ಯಾದ ಕಾರ್ಯತಂತ್ರ ಅಣ್ವಸ್ತ್ರ ಪಡೆಗಳು ಶನಿವಾರ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಪಸ್ಥಿತಿಯಲ್ಲಿ ಸಮರಾಭ್ಯಾಸ ನಡೆಸಿರುವ ಹಿನ್ನೆಲೆಯಲ್ಲಿ ರಶ್ಯಾ ಆಕ್ರಮಣದ ಭೀತಿ ಹೆಚ್ಚಿದೆ. ಯಾವುದೇ ಕ್ಷಣದಲ್ಲಿ ದಾಳಿ ಆರಂಭವಾಗುವ ಪರಿಸ್ಥಿತಿಯಿದೆ ಎಂದು ಅಮೆರಿಕ ಅಧ್ಯಕ್ಷ ಬೈಡನ್ ಅವರ ರಾಷ್ಟ್ರೀಯ ಭದ್ರತಾ ತಂಡ ಮಾಹಿತಿ ರವಾನಿಸಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಬೈಡನ್ ರವಿವಾರ ಉನ್ನತ ಸಲಹೆಗಾರರ ಸಭೆ ಕರೆದಿದ್ದಾರೆ.
ಗಡಿಯಿಂದ ಕೆಲವು ತುಕಡಿಗಳನ್ನು ಹಿಂದಕ್ಕೆ ಕರೆಸಿರುವುದಾಗಿ ರಶ್ಯಾ ನೀಡಿದ ಹೇಳಿಕೆ ಸುಳ್ಳು ಎಂದು ಜಿ7 ದೇಶಗಳ ವಿದೇಶ ಸಚಿವರು ಹೇಳಿದ್ದು, ಉಕ್ರೇನ್ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಶನಿವಾರ ಉಕ್ರೇನ್ ಗಡಿಭಾಗದಲ್ಲಿ ಉಕ್ರೇನ್ ಪಡೆ ಹಾಗೂ ರಶ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ಗುಂಪಿನ ಮಧ್ಯೆ ಶೆಲ್ ದಾಳಿ ನಡೆದಿದ್ದು ರಶ್ಯಾ ಪಡೆಗಳು ಗಡಿಯ ಇನ್ನಷ್ಟು ಸನಿಹಕ್ಕೆ ತಲುಪಿವೆ. ಉಕ್ರೇನ್ ಮೇಲಿನ ದಾಳಿ ಅನಿವಾರ್ಯವೇನಲ್ಲ, ಸಂಘರ್ಷದ ಅಂಚಿನಿಂದ ಪುಟಿನ್ ಒಂದು ಹೆಜ್ಜೆ ಹಿಂದೆ ಇಡಲಿದ್ದಾರೆ ಎಂದು ಆಶಿಸುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.
ಈ ಹಿಂದಿನ ಸೋವಿಯಟ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ ಅನ್ನು ನೇಟೊ ಗುಂಪಿಗೆ ಸೇರ್ಪಡೆಗೊಳಿಸಲು ಅಮೆರಿಕ ಸಹಿತ ಪಾಶ್ಚಿಮಾತ್ಯ ದೇಶಗಳು ನಡೆಸುತ್ತಿರುವ ಪ್ರಯತ್ನ ರಶ್ಯಾದ ಭದ್ರತೆಗೆ ಅಪಾಯದ ಸಂಕೇತವಾಗಿದೆ. ಈ ಪ್ರಯತ್ನದಿಂದ ನೇಟೊ ದೂರ ಸರಿದರೆ ಉಕ್ರೇನ್ ಗಡಿಭಾಗದಲ್ಲಿನ ಉದ್ವಿಗ್ನತೆ ಕಡಿಮೆಯಾಗುತ್ತದೆ ಎಂಬುದು ಪುಟಿನ್ ಅವರ ವಾದವಾಗಿದೆ. ಈ ವಾದವನ್ನು ನಿರಾಕರಿಸಿರುವ ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು, ಉಕ್ರೇನ್ ಮೇಲೆ ಆಕ್ರಮಣ ನಡೆಸಲು ರಶ್ಯಾ ನೆಪ ಹುಡುಕುತ್ತಿದೆ ಎಂದು ಟೀಕಿಸಿವೆ.
ಲಸಿಕೆ ಬದಲು ಕೆಮ್ಮಿನ ಸಿರಪ್
ಉಕ್ರೇನ್ ಗಡಿಭಾಗದಲ್ಲಿ ಕಳೆದ ಕೆಲ ತಿಂಗಳಿಂದ ಉಲ್ಬಣಿಸಿರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಹತಾಶೆ ವ್ಯಕ್ತಪಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆಂಸ್ಕಿ, ಜಾಗತಿಕ ಭದ್ರತಾ ವ್ಯವಸ್ಥೆ ಬಹುತೇಕ ಶಿಥಿಲಗೊಂಡಿದೆ ಎಂದಿದ್ದಾರೆ. ಉಕ್ರೇನ್ನ ಭದ್ರತೆಗೆ ಹೊಸ ಖಾತರಿಯನ್ನು ರೂಪಿಸುವಂತೆ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಖಾಯಂ ಸದಸ್ಯರಾದ ಜರ್ಮನಿ ಮತ್ತು ಟರ್ಕಿಯನ್ನು ಅವರು ಆಗ್ರಹಿಸಿದ್ದಾರೆ.
ಮ್ಯೂನಿಚ್ನಲ್ಲಿ ಭದ್ರತೆಗೆ ಸಂಬಂಧಿಸಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ದಶಕಗಳ ಹಿಂದೆ ಜಾಗತಿಕ ಸಮುದಾಯ ಒಪ್ಪಿಕೊಂಡು ರೂಪಿಸಲಾದ ನಿಯಮಗಳು ಈಗ ನಿಷ್ಕ್ರಿಯವಾಗಿವೆ. ಹೊಸ ಬೆದರಿಕೆಯ ವಿರುದ್ಧ ಕ್ರಮ ಕೈಗೊಳ್ಳಲು ಇವು ಸಾಕಾಗದು. ಕೊರೋನ ಸೋಂಕಿನ ಲಸಿಕೆಯ ಅಗತ್ಯವಿದ್ದಾಗ ಕೆಮ್ಮಿನ ಸಿರಪ್ ಕೊಟ್ಟಂತಾಗಿದೆ ಎಂದು ಟೀಕಿಸಿದ್ದಾರೆ. ಈ ಮಧ್ಯೆ, ಉಕ್ರೇನ್ಗೆ ಸುಮಾರು 350 ಮಿಲಿಯನ್ ಡಾಲರ್ ಆರ್ಥಿಕ ನೆರವು ಒದಗಿಸಲು ವಿಶ್ವಬ್ಯಾಂಕ್ ಸಿದ್ಧ ಎಂದು ಬ್ಯಾಂಕ್ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಶನಿವಾರ ಹೇಳಿದ್ದಾರೆ.
ಯುರೋಪ್ ನ ಅತೀ ದೊಡ್ಡ ಸಂಘರ್ಷಕ್ಕೆ ರಶ್ಯಾ ತಯಾರಿ: ಬೋರಿಸ್ ಜಾನ್ಸನ್ ಎಚ್ಚರಿಕೆ
ಯುರೋಪ್ ನಲ್ಲಿ ಎರಡನೇ ವಿಶ್ವಯುದ್ಧದ ಬಳಿಕದ ಅತೀ ದೊಡ್ಡ ಸಂಘರ್ಷಕ್ಕೆ ರಶ್ಯಾ ಸಿದ್ಧತೆ ನಡೆಸುತ್ತಿದೆ. ಆದರೆ ಉಕ್ರೇನ್ ಮೇಲಿನ ಯಾವುದೇ ಅತಿಕ್ರಮಣವು ರಶ್ಯಾಕ್ಕೆ ಜಾಗತಿಕ ಆರ್ಥಿಕ ನೆರವಿನ ಸ್ಥಂಭನಕ್ಕೆ ಕಾರಣವಾಗಬಹುದು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಎಚ್ಚರಿಸಿದ್ದಾರೆ.
ವಾಸ್ತವವೆಂದರೆ, ಈಗಾಗಲೇ ಈ ಯೋಜನೆಗೆ (ಆಕ್ರಮಣ) ಹಲವು ರೀತಿಯಲ್ಲಿ ಚಾಲನೆ ನೀಡಲಾಗಿದೆ ಎಂದು ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ರಶ್ಯಾ ಬೆಂಬಲಿತ ಬಂಡುಗೋರರ ವಶದಲ್ಲಿರುವ ಉಕ್ರೇನ್ನ ಉತ್ತರದ ಗಡಿಯ ಮೂಲಕ ಮತ್ತು ಬೆಲಾರೂಸ್ ಮೂಲಕ ತನ್ನ ಪಡೆಯನ್ನು ಮುಂದೊತ್ತಿ ಉಕ್ರೇನ್ನ ರಾಜಧಾನಿ ಕೀವ್ ಅನ್ನು ಸುತ್ತುವರಿಯುವುದು ರಶ್ಯಾದ ಯೋಜನೆಯಾಗಿದೆ ಎಂಬ ಅಮೆರಿಕದ ಗುಪ್ತಚರ ಮಾಹಿತಿಯನ್ನು ಉಲ್ಲೇಖಿಸಿದ ಅವರು, ಸಂಘರ್ಷದಿಂದ ಮಾನವರ ಬದುಕಿನ ಮೇಲೆ ಆಗುವ ಘೋರ ಪರಿಣಾಮಗಳನ್ನು ಜನ ಅರಿತುಕೊಳ್ಳಬೇಕು ಎಂದರು.
ಆಕ್ರಮಣ ನಡೆದರೆ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ಗೆ ಬೆಂಬಲ ಮತ್ತು ನೆರವು ಮುಂದುವರಿಸಲಿದೆ ಎಂದು ಪುನರುಚ್ಚರಿಸಿದ ಅವರು, ಯುರೋಪ್ನಲ್ಲಿ 1945ರ ಬಳಿಕದ ಅತೀ ದೊಡ್ಡ ಯುದ್ಧ ನಡೆಸುವುದು ಈಗಿನ ಯೋಜನೆಯಾಗಿದೆ ಎಂದು ಹೇಳಲು ಆತಂಕವಾಗುತ್ತಿದೆ ಎಂದರು. ಪಾಶ್ಚಿಮಾತ್ಯ ದೇಶಗಳು ರಶ್ಯಾದ ಮೇಲೆ ಆರ್ಥಿಕ ನಿಬರ್ಂಧ ವಿಧಿಸಿದರೆ ಲಂಡನ್ನ ಶೇರು ಮಾರುಕಟ್ಟೆ ರಶ್ಯಾದ ಸಂಸ್ಥೆಗಳಿಗೆ ಬಾಗಿಲು ಮುಚ್ಚುತ್ತದೆ. ಜತೆಗೆ ರಶ್ಯಾ ಸಂಸ್ಥೆಗಳು ಡಾಲರ್ ಮತ್ತು ಪೌಂಡ್ನಲ್ಲಿ ವ್ಯವಹಾರ ನಡೆಸಲು ಸಾಧ್ಯವಾಗದೆ ರಶ್ಯಾಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಜಾನ್ಸನ್ ಎಚ್ಚರಿಸಿದ್ದಾರೆ.