×
Ad

ಕೆನಡಾ: ಲಸಿಕೆ ವಿರೋಧಿ ಪ್ರತಿಭಟನೆ ಹತ್ತಿಕ್ಕಲು ಪೊಲೀಸರ ಲಾಠಿ ಪ್ರಹಾರ; 170 ಮಂದಿ ಬಂಧನ

Update: 2022-02-20 22:54 IST
photo courtesy:twitter

ಒಟ್ಟಾವ, ಫೆ.20: ಕೆನಡಾದ ರಾಜಧಾನಿ ಒಟ್ಟಾವದಲ್ಲಿ ಕೊರೋನ ಸೋಂಕಿನ ಲಸಿಕೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಪ್ರಧಾನ ಕೇಂದ್ರವನ್ನು ಶನಿವಾರ ಪೊಲೀಸರು ತೆರವುಗೊಳಿಸಲು ಯಶಸ್ವಿಯಾಗಿದ್ದಾರೆ. ಲಾಠಿ ಪ್ರಹಾರ ಮತ್ತು ಮೆಣಸಿನ ಪುಡಿ ಎರಚಿ ಪ್ರತಿಭಟನಾಕಾರರನ್ನು ಚದುರಿಸಿದ್ದು ಹಲವರನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

ರಾಜಧಾನಿ ಒಟ್ಟಾವದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸುವ ಯೋಜನೆಯನ್ನು ವಿಫಲಗೊಳಿಸಲು ಶನಿವಾರ ಹೆಚ್ಚುವರಿ ಪೊಲೀಸರ ಸಹಿತ ಬಿಗಿ ಬಂದೋಬಸ್ತ್ ನಡೆಸಲಾಗಿತ್ತು. ಬ್ಯಾರಿಕೇಡ್ಗಳನ್ನು ಬದಿಗೆ ಸರಿಸಿ ಮುಂದೊತ್ತಿ ಬಂದ ಪ್ರತಿಭಟನಾಕಾರರು ‘ಲಸಿಕೆಯಲ್ಲ ಸ್ವಾತಂತ್ರ್ಯ ಬೇಕು’ ಎಂದು ಘೋಷಣೆ ಕೂಗುತ್ತಾ ಪೊಲೀಸರತ್ತ ಗ್ಯಾಸ್ ಸಿಲಿಂಡರ್ ಹಾಗೂ ಹೊಗೆ ಬಾಂಬ್ಗಳನ್ನು ಎಸೆದರು. 

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಯುದ್ಧತಂತ್ರದ ವಾಹನ ಹಾಗೂ ಸ್ನಿಪರ್ ದಳದೊಂದಿಗೆ ಸಜ್ಜಾಗಿದ್ದ ಪಡೆ ಬಲಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಿ ಸಂಸತ್ ಭವನದ ಎದುರಿನ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎಂದು ವರದಿಯಾಗಿದೆ.

 ರಸ್ತೆ ಮಧ್ಯೆ ಪಾರ್ಕ್ ಮಾಡಲಾಗಿದ್ದ ಲಾರಿಗಳನ್ನು ಕ್ರೇನ್ ಬಳಸಿ ಪಕ್ಕಕ್ಕೆ ಸರಿಸಲಾಯಿತು ಮತ್ತು ರಸ್ತೆಯಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶಿಬಿರಗಳನ್ನು ತೆರವುಗೊಳಿಸಲಾಯಿತು. ಪ್ರತಿಭಟನಾಕಾರರನ್ನು ಚದುರಿಸಲು 2 ದಿನದಿಂದ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಬಹುಮುಖ್ಯವಾದ ಪ್ರಗತಿ ಸಾಧಿಸಲಾಗಿದೆ ಎಂದು ಒಟ್ಟಾವದ ಹಂಗಾಮಿ ಪೊಲೀಸ್ ಮುಖ್ಯಸ್ಥ ಸ್ಟೀವ್ ಬೆಲ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. 

ಕಾರ್ಯಾಚರಣೆ ಆರಂಭವಾದಂದಿನಿಂದ 170 ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರು ಪೊಲೀಸ್ ಕಾರ್ಯಾಚರಣೆಗೆ ಅಡ್ಡಿಪಡಿಸಲು ತಮ್ಮ ಮಕ್ಕಳನ್ನು ಎದುರು ನಿಲ್ಲಿಸುವ ಅಪಾಯಕಾರಿ ನಡೆಯನ್ನು ಅನುಸರಿಸುತ್ತಿದ್ದಾರೆ ಎಂದು ಬೆಲ್ ಹೇಳಿದ್ದಾರೆ.

ಈ ಮಧ್ಯೆ, ಪೊಲೀಸರು ಥಳಿತ, ಲಾಠಿ ಚಾರ್ಜ್ ಮತ್ತು ಮೆಣಸಿನ ಪುಡಿ ಎರಚುವ ವಿಧಾನದಿಂದ ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಇನ್ನಷ್ಟು ಕಠಿಣ ಮತ್ತು ಕ್ರೂರ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News