×
Ad

ಇಥಿಯೋಪಿಯಾ: ನೈಲ್ ನದಿಯ ವಿವಾದಾತ್ಮಕ ಜಲವಿದ್ಯುತ್ ಯೋಜನೆಗೆ ಚಾಲನೆ

Update: 2022-02-20 23:05 IST
‘ದಿ ಗ್ರ್ಯಾಂಡ್ ಇಥಿಯೋಪಿಯನ್ ರಿನೈಸೆನ್ಸ್ ಡ್ಯಾಮ್’

ಅದೀಸ್ ಅಬಾಬ, ಫೆ.20: ನೈಲ್ ನದಿಯಲ್ಲಿನ ವಿವಾದಾತ್ಮಕ ಬಹುಮಿಲಿಯ ಡಾಲರ್ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆಗೆ ರವಿವಾರ ಇಥಿಯೋಪಿಯಾ ಪ್ರಧಾನಿ ಅಬೀಯ್ ಅಹ್ಮದ್ ಚಾಲನೆ ನೀಡಿದ್ದಾರೆ.

ಅಣೆಕಟ್ಟಿನ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ರವಿವಾರ ಉನ್ನತ ಅಧಿಕಾರಿಗಳೊಂದಿಗೆ ಆಗಮಿಸಿದ ಪ್ರಧಾನಿ ಅಹ್ಮದ್ ಇಲೆಕ್ಟ್ರಾನಿಕ್ಸ್ ಪರದೆಯಲ್ಲಿನ ಬಟನ್ ಒತ್ತುವ ಮೂಲಕ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಿದರು. ಇದು ನೂತನ ಯುಗದ ಆರಂಭವಾಗಿದ್ದು ನಮ್ಮ ದೇಶ ಹಾಗೂ ನಾವು ಜತೆಗೂಡಿ ಕೆಲಸ ಮಾಡಬಯಸುವ ಈ ವಲಯದ ಇತರ ದೇಶಗಳಿಗೆ ಶುಭ ಸಮಾಚಾರವಾಗಿದೆ ಎಂದವರು ಬಣ್ಣಿಸಿದ್ದಾರೆ.

ಆಫ್ರಿಕಾದ ಅತೀ ದೊಡ್ಡ ಜಲವಿದ್ಯುತ್ ಯೋಜನೆಯಾದ ‘ದಿ ಗ್ರ್ಯಾಂಡ್ ಇಥಿಯೋಪಿಯನ್ ರಿನೈಸೆನ್ಸ್ ಡ್ಯಾಮ್’ (ಜಿಆರ್ಇಡಿ)ನ ನಿರ್ಮಾಣ ಕಾರ್ಯಕ್ಕೆ 2011ರಲ್ಲಿ ಚಾಲನೆ ದೊರೆತಂದಿನಿಂದಲೂ ವಿವಾದದ ಕೇಂದ್ರಬಿಂದುವಾಗಿದೆ. ನೈಲ್ ನದಿ ಹರವಿನ ಕೆಳಪಾತ್ರದಲ್ಲಿರುವ ದೇಶಗಳಾದ ಈಜಿಪ್ಟ್ ಮತ್ತು ಸುಡಾನ್ ಈ ಯೋಜನೆಯನ್ನು ವಿರೋಧಿಸುತ್ತಿದ್ದು, ತಮಗೆ ಲಭಿಸಬೇಕಿರುವ ನೀರಿನ ಪಾಲಿಗೆ ಕೊರತೆಯಾಗಲಿದೆ ಎಂದು ಆಕ್ಷೇಪಿಸಿವೆ. 

ಆದರೆ ಇದು ವಿದ್ಯುತ್ ವ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಅತ್ಯಗತ್ಯ ಎಂದು ಇಥಿಯೋಪಿಯಾ ಹೇಳಿದೆ. ಈ ನೀರಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ ಮತ್ತು ನದಿ ನೀರು ಈ ಹಿಂದಿನಂತೆಯೇ ಈಜಿಪ್ಟ್ ಮತ್ತು ಸುಡಾನ್ ಗೆ ಹರಿದು ಹೋಗಲಿದೆ. ನಮ್ಮ ವಿದ್ಯುತ್ ಯೋಜನೆಯಿಂದ ಈಜಿಪ್ಟ್ ಮತ್ತು ಸುಡಾನ್ ನ ಜನತೆ ಉಪವಾಸ ಬೀಳಲಿದ್ದಾರೆ ಎಂಬ ವದಂತಿಗೆ ಅರ್ಥವಿಲ್ಲ . ಯಾರಿಗೂ ತೊಂದರೆ ನೀಡಲು ನಮಗೆ ಇಷ್ಟವಿಲ್ಲ. ಜೀವಮಾನದಲ್ಲಿ ತಮ್ಮ ಮನೆಯಲ್ಲಿ ವಿದ್ಯುತ್ ಬಲ್ಬ್ ಕಾಣದಿರುವ ಇಥಿಯೋಪಿಯಾದ ಸಾವಿರಾರು ತಾಯಂದಿರಿಗೆ ವಿದ್ಯುತ್ ಪೂರೈಸುವುದು ನಮ್ಮ ಉದ್ದೇಶವಾಗಿದೆ ಎಂದು ಪ್ರಧಾನಿ ಅಬೀಯ್ ಅಹ್ಮದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News