ಬ್ರೆಝಿಲ್: ನೆರೆ, ಭೂಕುಸಿತದಿಂದ ಮೃತರ ಸಂಖ್ಯೆ 146ಕ್ಕೆ ಏರಿಕೆ

Update: 2022-02-20 18:25 GMT
ಬ್ರೆಝಿಲ್

ರಿಯೊಡಿಜನೈರೊ, ಫೆ.20: ಬ್ರೆಝಿಲ್ ನ ಪೆಟ್ರೊಪೊಲಿಸ್ ನಗರದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 146ಕ್ಕೇರಿದ್ದು 218 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೃತರಲ್ಲಿ 26 ಮಂದಿ ಮಕ್ಕಳೂ ಸೇರಿದ್ದು ಪೆಟ್ರೊಪೊಲಿಸ್ ನಗರದೆಲ್ಲೆಡೆ ಕುಸಿದ ಮನೆಯ ಅವಶೇಷ, ಕಲ್ಲು, ಕೆಸರು ಮಣ್ಣಿನ ರಾಶಿ ಬಿದ್ದಿದೆ. ಇದರಡಿ ಇನ್ನಷ್ಟು ಮೃತದೇಹಗಳು ಇರುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯ 5ನೇ ದಿನವಾದ ಶನಿವಾರವೂ ಮುಂದುವರಿದಿದ್ದು ಇನ್ನಷ್ಟು ಮಂದಿ ಬದುಕುಳಿದಿರುವ ನಿರೀಕ್ಷೆ ಇಲ್ಲ ಎಂದು ರಕ್ಷಣಾ ತಂಡ ಹೇಳಿದೆ. ಮೃತಪಟ್ಟ 146 ಮಂದಿಯಲ್ಲಿ 91 ಮೃತದೇಹಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನೆರೆಯಿಂದ ಅತೀ ಹೆಚ್ಚಿನ ಹಾನಿಗೊಳಗಾಗಿರುವ ಪ್ರದೇಶಗಳನ್ನು ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸಿದ ಅಧ್ಯಕ್ಷ ಜೆಯರ್ ಬೊಲ್ಸೊನಾರೊ, ಪೆಟ್ರೊಪೊಲಿಸ್ ನಗರ ಯುದ್ಧದ ಬಳಿಕದ ಪ್ರದೇಶದ ಸ್ಥಿತಿಯಲ್ಲಿದೆ. ಈ ನಗರದಲ್ಲಿ ಭಾರೀ ನಾಶ, ನಷ್ಟ ಮತ್ತು ಹಾನಿ ಸಂಭವಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
  
ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿ ಬ್ರೆಝಿಲ್ನಲ್ಲಿ ಸರಣಿ ಚಂಡಮಾರುತ ಸಂಭವಿಸುತ್ತಿದ್ದು ಕಳೆದ 3 ತಿಂಗಳಿನಲ್ಲಿ ತೀವ್ರ ಮಳೆ ಮತ್ತು ಪ್ರವಾಹದಿಂದಾಗಿ ಕನಿಷ್ಟ 198 ಮಂದಿ ಮೃತಪಟ್ಟಿದ್ದಾರೆ. ಆಗ್ನೇಯದ ಸಾವೊ ಪಾಲೊ ಮತ್ತು ಈಶಾನ್ಯದ ಬಹಿಯಾ ಮತ್ತು ಪೆಟ್ರೊಪೊಲಿಸ್ ರಾಜ್ಯಗಳಲ್ಲಿ ಗರಿಷ್ಟ ಪ್ರಮಾಣದ ನಾಶನಷ್ಟ ಸಂಭವಿಸಿದೆ. ಮಳೆ, ಪ್ರವಾಹದಿಂದ ಹಲವೆಡೆ ಭೂಕುಸಿತ ಸಂಭವಿಸಿದ್ದು ಇದುವರೆಗೆ 24 ಮಂದಿಯನ್ನು ಮಣ್ಣಿನಡಿಯಿಂದ ರಕ್ಷಿಸಲಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿರುವುದರಿಂದ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News