ಬ್ರಿಟನ್‍ನಿಂದ ಆಮದು ಮಾಡಲಾಗಿದ್ದ ನೂರಾರು ಕಂಟೇನರ್ ತ್ಯಾಜ್ಯವನ್ನು ವಾಪಸ್ ಕಳುಹಿಸಿದ ಶ್ರೀಲಂಕಾ

Update: 2022-02-21 14:59 GMT
Photo: Theguardian

ಕೊಲಂಬೋ: ಅಕ್ರಮವಾಗಿ ಆಮದು ಮಾಡಲಾಗಿದ್ದ ಸಾವಿರಾರು ಟನ್ ತೂಕದ ತ್ಯಾಜ್ಯ ವಸ್ತುಗಳನ್ನು ತುಂಬಿದ ನೂರಾರು ಕಂಟೇನರ್‍ಗಳನ್ನು ಶ್ರೀಲಂಕಾ ಸೋಮವಾರ ಮರಳಿ ಬ್ರಿಟನ್‍ಗೆ ಸಾಗಾಟ ಮಾಡಿದೆ.

ಈ ತ್ಯಾಜ್ಯವಸ್ತುಗಳು ಶ್ರೀಲಂಕಾಗೆ 2017 ಹಾಗೂ 2019ರ ನಡುವೆ ಬಂದಿತ್ತಲ್ಲದೆ ಅವುಗಳನ್ನು ಬಳಸಿದ ಮ್ಯಾಟ್ರೆಸ್‍ಗಳು, ಕಾರ್ಪೆಟ್‍ಗಳು ಮತ್ತು ರಗ್‍ಗಳು ಎಂದು ಬಣ್ಣಿಸಲಾಗಿತ್ತು.

ಕಂಟೇನರ್‍ಗಳು ಆಗಮಿಸುವಾಗ ಅವುಗಳು ಅಸಾಧ್ಯವಾದ ವಾಸನೆಯನ್ನು ಹೊರಸೂಸಿಸುತ್ತಿದ್ದವು ಎನ್ನಲಾಗಿದೆ. ಇಂದು ವಾಪಸ್ ಕಳುಹಿಸಲಾದ 45 ಕಂಟೇನರ್‍ಗಳು ಇಲ್ಲಿಯವರೆಗೆ ವಾಪಸ್ ಕಳುಹಿಸಲಾದ 263 ಕಂಟೇನರ್‍ಗಳ ಪೈಕಿ ಕೊನೆಯದಾಗಿದ್ದವು. ಒಟ್ಟು  ಸುಮಾರು 3,000 ಟನ್ ವೇಸ್ಟ್ ಇಂಗ್ಲೆಂಡ್‍ನಿಂದ ಶ್ರೀಲಂಕಾಗೆ ಆಗಮಿಸಿತ್ತೆಮದು ತಿಳಿದು ಬಂದಿದೆ.

ಇಂತಹ ಅಪಾಯಕಾರಿ ತ್ಯಾಜ್ಯವನ್ನು ಮತ್ತೆ ಆಮದು ಮಾಡುವ ಯತ್ನಗಳು ನಡೆಯಬಹುದು ಆದರೆ ನಾವು ಇದು ಮತ್ತೆ ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದು ಕಸ್ಟಮ್ಸ್ ಮುಖ್ಯಸ್ಥ ವಿಜಿತಾ ರವಿಪ್ರಿಯ ಹೇಳಿದ್ದಾರೆ.

ವೈದ್ಯಕೀಯ ತ್ಯಾಜ್ಯ ಹೊಂದಿದ್ದ ಮೊದಲ ಬ್ಯಾಚಿನ 21 ಕಂಟೇನರ್‍ಗಳನ್ನು ಸೆಪ್ಟೆಂಬರ್ 2020ರಲ್ಲಿ ಬ್ರಿಟನ್‍ಗೆ ವಾಪಸ್ ಕಳುಹಿಸಲಾಗಿತ್ತು. ಸ್ಥಳೀಯ ಕಂಪೆನಿಯೊಂದು ಈ ತ್ಯಾಜ್ಯವನ್ನು ಬ್ರಿಟನ್‍ನಿಂದ ಆಮದು ಮಾಡಿಕೊಂಡಿತ್ತಲ್ಲದೆ ಬಳಸಿದ ಮ್ಯಾಟ್ರೆಸ್‍ಗಳಲ್ಲಿನ ಸ್ಪ್ರಿಂಗ್ ಮತ್ತು ಹತ್ತಿಯನ್ನು ವಿದೇಶಗಳಲ್ಲಿರುವ ತಯಾರಕರಿಗೆ ಕಳುಹಿಸುವ ಉದ್ದೇಶ ಹೊಂದಿತ್ತೆಂದು ಹೇಳಲಾಗಿತ್ತು.

ಆದರೆ ಈ ಕುರಿತು ಯಾವುದೇ ಸೂಕ್ತ ಸಾಕ್ಷ್ಯಗಳು ಕಸ್ಟಮ್ಸ್ ಗೆ ದೊರೆತಿರಲಿಲ್ಲ. ಸ್ಥಳೀಯ ಪರಿಸರಾಸಕ್ತರ ಗುಂಪೊಂದು ಶ್ರೀಲಂಕಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಇಂತಹ ಅಪಾಯಕಾರಿ ತ್ಯಾಜ್ಯವನ್ನು ವಾಪಸ್ ಕಳುಹಿಸಬೇಕೆಂದು ಕೋರಿತ್ತು. ಅಪಾಯಕಾರಿ ತ್ಯಾಜ್ಯ ಸಾಗಾಟ ಕುರಿತಾದ ಅಂತರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ ಈ ತ್ಯಾಜ್ಯವನ್ನು ಆಮದು ಮಾಡಲಾಗಿತ್ತೆಂದು ಕಸ್ಟಮ್ಸ್ ಹೇಳಿದೆ.

ಈ ತ್ಯಾಜ್ಯ ಆಮದು ಮಾಡಿದ ಸಂಸ್ಥೆಯು ಸುಮಾರು 180 ಟನ್ ತ್ಯಾಜ್ಯವನ್ನು  ಭಾರತ ಮತ್ತು ದುಬೈಗೆ 2017 ಮತ್ತು 2018ಗೆ ಮರುಸಾಗಿಸಿತ್ತು ಎಂದು 2019ರಲ್ಲಿ ಶ್ರೀಲಂಕಾ ನಡೆಸಿದ ಸಂಶೋಧನೆ ತಿಳಿಸಿತ್ತು.

ಫಿಲಿಪ್ಪೀನ್ಸ್, ಇಂಡೊನೇಷ್ಯಾ ಮತ್ತು ಮಲೇಷ್ಯಾ ಕೂಡ ನೂರಾರು ಕಂಟೇನರ್‍ಗಳನ್ನು ತಿರಸ್ಕರಿಸಿ  ಮತ್ತೆ ಅವುಗಳನ್ನು ಕಳುಹಿಸಿದ ದೇಶಗಳಿಗೇ ವಾಪಸ್ ಕಳುಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News