ಬಿಹಾರ: ಬುರ್ಕಾ ಧರಿಸಿದ್ದ ಯುವತಿಗೆ ವಹಿವಾಟು ನಿರ್ಬಂಧಿಸಿದ ಬ್ಯಾಂಕ್!

Update: 2022-02-21 15:31 GMT
ಬಿಹಾರ:

ಪಾಟ್ನಾ,ಫೆ.21: ಬುರ್ಕಾ ಧರಿಸಿದ್ದ ಯುವತಿಯೋರ್ವಳು ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ವಹಿವಾಟು ನಡೆಸುವುದನ್ನು ತಡೆದ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ಸಂಭವಿಸಿದೆ. ಯುವತಿ ಘಟನೆಯನ್ನು ವೀಡಿಯೊ ಚಿತ್ರೀಕರಿಸಿ ರವಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾಳೆ.

ಯುವತಿ ಶನಿವಾರ ಬೇಗುಸರಾಯ್‌ನ ಮನ್ಸೂರ್ ಚೌಕ್‌ನಲ್ಲಿರುವ ಯುಕೋ ಬ್ಯಾಂಕ್ ಶಾಖೆಗೆ ಹಣವನ್ನು ಹಿಂದೆಗೆಯಲು ತೆರಳಿದ್ದಳು. ವೀಡಿಯೊದಲ್ಲಿ ಕಂಡು ಬಂದಿರುವಂತೆ ಬ್ಯಾಂಕಿನ 3-4 ಸಿಬ್ಬಂದಿಗಳು ಹಿಜಾಬ್ ತೆಗೆದರೆ ಮಾತ್ರ ಹಣವನ್ನು ಹಿಂದೆಗೆದುಕೊಳ್ಳಬಹುದು ಎಂದು ತಿಳಿಸಿದ್ದರು. ಇದನ್ನು ಬಲವಾಗಿ ಆಕ್ಷೇಪಿಸಿದ್ದ ಯುವತಿ ತನ್ನ ಹೆತ್ತವರಿಗೆ ಕರೆ ಮಾಡಿದ್ದಳು. ಬ್ಯಾಂಕಿನಲ್ಲಿ ಹಿಜಾಬ್‌ಗೆ ಅವಕಾಶವಿಲ್ಲವೆಂಬ ಲಿಖಿತ ನೋಟಿಸನ್ನು ತೋರಿಸುವಂತೆ ಹೆತ್ತವರು ಸಿಬ್ಬಂದಿಗಳನ್ನು ಕೇಳಿದ್ದರು.

‘ನಾನು ಮತ್ತು ನನ್ನ ಮಗಳು ಪ್ರತಿ ತಿಂಗಳೂ ಬ್ಯಾಂಕಿಗೆ ಬರುತ್ತಿದ್ದೇವೆ. ಆದರೆ ಹಿಜಾಬ್‌ನ್ನು ಯಾರೂ ಆಕ್ಷೇಪಿಸಿರಲಿಲ್ಲ. ಈಗೇಕೆ ಹಾಗೆ ಮಾಡುತ್ತಿದ್ದಾರೆ? ಇಂತಹ ನಿಯಮವೇನಾದರೂ ಕರ್ನಾಟಕದಲ್ಲಿ ಜಾರಿಗೊಂಡಿದ್ದರೆ ಬಿಹಾರದಲ್ಲಿಯೂ ಅದನ್ನೇಕೆ ಅವರು ಜಾರಿ ಮಾಡುತ್ತಿದ್ದಾರೆ? ಬ್ಯಾಂಕಿಂಗ್ ಕಾರ್ಯಾಚರಣೆಗಳಲ್ಲಿ ಹಿಜಾಬ್‌ನ್ನು ನಿಷೇಧಿಸಿರುವ ಬಗ್ಗೆ ಲಿಖಿತ ಅಧಿಸೂಚನೆಯಿದೆಯೇ ಎಂದು ಯುವತಿಯ ತಂದೆ ವೀಡಿಯೊದಲ್ಲಿ ಪ್ರಶ್ನಿಸಿದ್ದಾರೆ.

ಘಟನೆಯ ವೀಡಿಯೊ ಚಿತ್ರೀಕರಣವನ್ನು ನಿಲ್ಲಿಸುವಂತೆಯೂ ಬ್ಯಾಂಕಿನ ಸಿಬ್ಬಂದಿಗಳು ಸೂಚಿಸಿದ್ದರು,ಆದರೆ ಯುವತಿಯ ಕುಟುಂಬ ಅದಕ್ಕೆ ನಿರಾಕರಿಸಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಅಪಲೋಡ್ ಆಗಿರುವ ವೀಡಿಯೊವನ್ನು ಮರು ಟ್ವೀಟ್ ಮಾಡಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ ಅದನ್ನು ಮುಖ್ಯಮಂತ್ರಿ ನಿತೀಶ ಕುಮಾರ ಅವರಿಗೆ ಟ್ಯಾಗ್ ಮಾಡಿದ್ದಾರೆ. ‘ನೀವು ನಿಮ್ಮ ಸಿದ್ಧಾಂತ,ತತ್ವಗಳು,ನೈತಿಕ ಜವಾಬ್ದಾರಿ ಮತ್ತು ಆತ್ಮಸಾಕ್ಷಿಯನ್ನು ಬಿಜೆಪಿಗೆ ಅಡಮಾನವಿಟ್ಟಿದ್ದೀರಿ ಎನ್ನುವುದು ನನಗೆ ಗೊತ್ತು. ಆದರೆ ನೀವು ದೇಶದ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೀರಿ. ಕನಿಷ್ಠ ಸಂವಿಧಾನವನ್ನಾದರೂ ಗೌರವಿಸಿ ಮತ್ತು ಆರೋಪಿ ಸಿಬ್ಬಂದಿಗಳನ್ನು ಬಂಧಿಸಿ ’ಎಂದು ಅವರು ಹೇಳಿದ್ದಾರೆ.

ಈ ನಡುವೆ ಘಟನೆಯ ಕುರಿತು ಟ್ವಿಟರ್‌ನಲ್ಲಿ ಹೇಳಿಕೆಯನ್ನು ನೀಡಿರುವ ಯುಕೋ ಬ್ಯಾಂಕ್,ನಾಗರಿಕರ ಧಾರ್ಮಿಕ ಭಾವನೆಗಳನ್ನು ಬ್ಯಾಂಕು ಗೌರವಿಸುತ್ತದೆ ಮತ್ತು ಜಾತಿ ಹಾಗೂ ಧರ್ಮದ ಆಧಾರದಲ್ಲಿ ತನ್ನ ಗ್ರಾಹಕರಿಗೆ ತಾರತಮ್ಯವನ್ನು ಎಸಗುವುದಿಲ್ಲ. ಈ ವಿಷಯವನ್ನು ಬ್ಯಾಂಕು ಪರಿಶೀಲಿಸುತ್ತಿದೆ ಎಂದು ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News