ಮೂಲಭೂತ ಹಕ್ಕಿನ ರಕ್ಷಣೆ, ಸಹೋದರತ್ವದ ಪ್ರಸರಣ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಹಾಗೂ ಸಹಭಾಗಿ ಸಂಘಟನೆಗಳ ಕರೆ

Update: 2022-02-21 16:48 GMT

ಉಡುಪಿ: ವಿದ್ಯಾರ್ಥಿನಿಯರು ತಮ್ಮ ತಲೆಯ ಕೂದಲನ್ನು ಮರೆಸಲು ಧರಿಸುವ ಒಂದು ಬಟ್ಟೆಯ ತುಂಡನ್ನು ವಿವಾದವನ್ನಾಗಿಸಿ, ದೇಶದ ಸಂವಿಧಾನದಲ್ಲಿ ನೀಡಲ್ಪಟ್ಟ ಮೂಲಭೂತ ಹಕ್ಕನ್ನು ನಿರಾಕರಿಸಲು ನೆಪವಾಗಿಸುವ ಪ್ರಯತ್ನ ನಡೆದಿದೆ. ತಮ್ಮ ಹೀನ ಉದ್ದೇಶದ ಇಡೇರಿಕೆಗಾಗಿ ಸಂಕುಚಿತ ಸಿದ್ದಾಂತ ಧ್ವಜವಾಹಕರು ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣ ವ್ಯವಸ್ಥೆ, ಅಧಿಕಾರ, ಪ್ರಜಾಪ್ರತಿನಿಧಿತ್ವ ಇತ್ಯಾದಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ನಕಾರಾತ್ಮಕ ಪ್ರಕ್ರಿಯೆಯ ವೇಗೋತ್ಕರ್ಷಕ್ಕಾಗಿ ಸಮಾಜದಲ್ಲಿ ಸಮುದಾಯಗಳ ಮಧ್ಯೆ ದ್ವೇಷ ಹರಡುವ ಪ್ರಯತ್ನವೂ ನಡೆದಿದೆ ಎಂಬ ಅಭಿಪ್ರಾಯ ಮುಸ್ಲಿಮ್ ಒಕ್ಕೂಟದ ಕರೆಯಂತೆ ಉಡುಪಿಯಲ್ಲಿ ನಡೆದ ಸಭೆಯಲ್ಲಿ ವ್ಯಕ್ತವಾಯಿತು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ‌.

ಸಭೆಯ ವಿವರ ನೀಡಿದ ಅವರು ಹಿಜಾಬ್ ಹಾಗೂ ಜನತೆಯ ಇನ್ನಿತರ ನ್ಯಾಯಪರ ಸಂವಿಧಾನಾತ್ಮಕ ಹಕ್ಕುಗಳನ್ನು ಉಳಿಸಿಕೊಳ್ಳುವುದಲ್ಲದೆ ಸಂವಿಧಾನದ ಆಶಯಗಳ ರಕ್ಷಣೆ, ಸಹೊದರತ್ವದ ಪ್ರಸಾರವನ್ನು ಸಮನ್ವಯದಿಂದ ನಡೆಸಲು ವಿವಿಧ ರಾಜ್ಯ ಸ್ತರದ ಸಂಘ ಸಂಸ್ಥೆಗಳ ಮುಖಂಡರು, ರಾಜ್ಯದ ಸಾಮಾಜಿಕ, ಪ್ರಜಾಪ್ರಭುತ್ವವಾದಿ ನಾಯಕರು, ರೈತ ಮುಖಂಡರು, ಚಿಂತಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಜನಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿರುವವರು ಉಡುಪಿಯ ಮಣಿಪಾಲ್ ಇನ್ ಹೋಟೆಲ್'ನಲ್ಲಿ ವಿಚಾರ ವಿನಿಮಯ ನಡೆಸಿದ್ದಾರೆ. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕರೆಯಂತೆ ಸಭೆ ಅಯೋಜಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಶೈಕ್ಷಣಿಕ ತುರ್ತುಸ್ಥಿತಿ ಬಗ್ಗೆ ಸರಕಾರ ಗಮನ ಸೆಳೆಯುವುದು, ಸಹೋದರ ಧರ್ಮೀಯರ ಮಧ್ಯೆ ಸಹಬಾಳ್ವೆಗಾಗಿ ಕಾರ್ಯಕ್ರಮ ರೂಪಣೆ, ವಿದ್ಯಾರ್ಥಿನಿಯರಲ್ಲಿ ಮಾನಸಿಕ ಸ್ಥೈರ್ಯ ತುಂಬಿ ಅವರಲ್ಲಿ ಖಿನ್ನತೆ ಆವರಿಸದಂತೆ ನೋಡಿಕೊಳ್ಳುವುದು ಹಾಗೂ ಇತರ ಸಕಾರಾತ್ಮಕ ಚಟುವಟಿಕೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು. 

ಸಭೆಯಲ್ಲಿ ಕರ್ನಾಟಕ ಜನಶಕ್ತಿಯ ಕೆ.ಎಲ್ ಅಶೋಕ್, ಬಹುತ್ವ ಕರ್ನಾಟಕದ ಎ.ನಾರಾಯಣ ಹಾಗೂ ಮನು, ಆಲ್ಟರ್'ನೇಟಿವ್ ಲಾ ಫೋರಮ್'ನ ಶ್ರೀನಿವಾಸನ್ ಹಾಗೂ ಮೈತ್ರಿ ಹೋರಾಟಗಾರರಾದ ನರಸಿಂಹ ಮೂರ್ತಿ, ಮಾಧ್ಯಮ ಸಂಸ್ಥೆಯ ಡಾ. ವಾಸು , ಸಹಬಾಳ್ವೆ ಉಡುಪಿಯ - ಕೆ ಪಣಿರಾಜ್, ಬಿಜಾಪುರದ ಮಹಿಳಾ ಹೋರಾಟಗಾರ್ತಿ ಸುನಿತಾ ಮೋರ್,  ಕ್ಯುಲ್ ಫೌಂಡೇಶನ್'ನ ಫವಾಝ್ ಶಾಹೀನ್, ಎಸ್ ವೈ ಎಸ್ ರಾಜ್ಯಾದ್ಯಕ್ಷ - ಝೈನಿ ಕಾಮಿಲ್ ಸಖಾಫಿ , ದಲಿತ ದಮನಿತರ ವೇದಿಕೆಯ ಶ್ಯಾಮ್ ರಾಜ್ ಬಿರ್ತಿ , ಜಮಾತೆ ಇಸ್ಲಾಮಿ ಹಿಂದ್ ನ - ಲಯೀಖ್ ಅಹಮದ್, ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್'ವಾದ) ಸುಂದರ್ ಮಾಸ್ಟರ್ , ಪಿ ಎಫ್ ಐ ನ -ಯಾಸಿರ್ ಹಸನ್, ಮಂಗಳೂರಿನ ಮುಸ್ಲಿಮ್ ಲೇಖಕರ ಸಂಘದ ಉಮರ್ ಯು.ಎಚ್, ಬಹುತ್ವ ಕರ್ನಾಟಕದ - ವಿನಯ್ ಕೆ ಎಸ್, ಎಪಿಸಿಆರ್ ನ - ನದೀಮ್ ಖಾನ್, ಕರ್ನಾಟಕ ರಾಜ್ಯ ರೈತಸಂಘದ ವೀರಸಂಘಯ್ಯ, ಫಾದರ್ ಮಾರ್ಟಿಸ್ , ಕೆ.ಪಿ.ಸಿ.ಸಿ ಪ್ಯಾನಲಿಸ್ಟ್ ವೆರೋನೊನಿಕಾ ಕರ್ನೇಲಿಯೋ , ಕ್ರೈಸ್ತ ಒಕ್ಕೂಟದ ಪ್ರಶಾಂತ್ ಜತ್ತನ್ನ, ಮಹಿಳಾ ಹೋರಾಟಗಾರ್ತಿ - ವಿದ್ಯಾ ದಿನಕರ್, ಕರ್ನಾಟಕ ಮುಸ್ಲಿಮ್ ಜಮಾಅತ್'ನ ಅಬ್ದುರ್ರಹಮಾನ್ ಕಲ್ಕಟ್ಟ ಹಾಗೂ ಸುಭಾನ್ ಹೊನ್ನಾಳ,ಎಸ್.ಐ.ಓ ಇದರ ಮಾಜಿ ಅಧ್ಯಕ್ಷ ಅಶ್ಫಾಕ್ ಅಹಮದ್, ಮುಸ್ಲಿಮ್ ಒಕ್ಕೂಟದ  ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪ್ರಮುಖರು, ಸಾಮಾಜಿಕ ಚಿಂತಕರು ವಿಭಿನ್ನ ಕ್ಷೇತ್ರಗಳ ಚಟುವಟಿಕೆಗಳಲ್ಲಿ ನಿರತ ಸಮಾಜಪ್ರೇಮಿಗಳು ಸಭೆಯಲ್ಲಿ  ಭಾಗವಹಿಸಿದ್ದರು ಎಂದು ಒಕ್ಕೂಟದ ಅಧ್ಯಕ್ಷರಾದ ಇಬ್ರಾಹಿಂ ಸಾಹೇಬ್  ಕೋಟ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News