ಸ್ವಿಸ್ ಬ್ಯಾಂಕ್ ನಲ್ಲಿ ಕೋಟ್ಯಂತರ ಡಾಲರ್ ಜಮೆಗೊಳಿಸಿರುವ ಪಾಕ್ ಸೇನಾಧಿಕಾರಿಗಳು: ವರದಿ

Update: 2022-02-21 17:51 GMT
ಸ್ವಿಸ್‌ ಬ್ಯಾಂಕ್‌

ಇಸ್ಲಮಾಬಾದ್, ಫೆ.21: ಸ್ವಿಸ್‌ ಬ್ಯಾಂಕ್‌ ನಲ್ಲಿ ಪಾಕಿಸ್ತಾನದ 1400 ಪ್ರಜೆಗಳಿಗೆ ಸಂಬಂಧಿಸಿದ 600 ಖಾತೆಗಳಲ್ಲಿ ಕೋಟ್ಯಾಂತರ ಡಾಲರ್ ಮೌಲ್ಯದ ಹಣವನ್ನು ಸಂಗ್ರಹಿಸಿರುವುದು ಸ್ವಿಸ್ ಬ್ಯಾಂಕ್ನಿಂದ ಸೋರಿಕೆಯಾದ ದಾಖಲೆಗಳಿಂದ ಬಹಿರಂಗಗೊಂಡಿದೆ ಎಂದು ರವಿವಾರ ಮಾಧ್ಯಮಗಳು ವರದಿ ಮಾಡಿವೆ.
       
ಐಎಸ್ಐ ಮಾಜಿ ಮುಖ್ಯಸ್ಥ ಜನರಲ್ ಅಖ್ತರ್ ಅಬ್ದುಲ್ ರಹ್ಮಾನ್ ಖಾನ್ ಸಹಿತ ಹಲವು ಪ್ರಮುಖ ಸೇನಾ ಮುಖಂಡರು, ರಾಜಕೀಯ ಮುಖಂಡರಿಗೆ ಸೇರಿದ ಖಾತೆ ಇದಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಸ್ವಿಸ್ ಖಾತೆಯಲ್ಲಿ ಪಾಕಿಸ್ತಾನಿಯರು ಜಮೆಗೊಳಿಸಿದ ಗರಿಷ್ಟ ಸರಾಸರಿ ಮೊತ್ತ 4.42 ಮಿಲಿಯನ್ ಸ್ವಿಸ್ ಫ್ರಾಂಕ್ಸ್ ಆಗಿದೆ ಎಂದು ಸ್ವಿಝರ್ಲ್ಯಾಂಡ್ನ ಹೂಡಿಕೆ ಸಂಸ್ಥೆ ಕ್ರೆಡಿಟ್ ಸ್ಯೂಸ್ ಸಂಸ್ಥೆಯಿಂದ ಸೋರಿಕೆಯಾದ ಅಂಕಿಅಂಶವನ್ನು ಪತ್ರಿಕೆ ಉಲ್ಲೇಖಿಸಿದೆ. 

ಅಮೆರಿಕ ಹಾಗೂ ಇತರ ದೇಶಗಳು ಪಾಕಿಸ್ತಾನಕ್ಕೆ ನೆರವಿನ ರೂಪದಲ್ಲಿ ನೀಡಿದ ಕೋಟ್ಯಾಂತರ ಡಾಲರ್ ಹಣವನ್ನು ಖಾನ್ ಸೋವಿಯತ್ ಒಕ್ಕೂಟದ ವಿರುದ್ಧ ಅಫ್ಗಾನಿಸ್ತಾನದ ಮುಜಾಹಿದೀನ್ಗಳು ನಡೆಸಿದ ಹೋರಾಟಕ್ಕೆ ಒದಗಿಸಿದ್ದರು. ಅಫ್ಗಾನಿಸ್ತಾನದಲ್ಲಿ ರಶ್ಯಾದ ಉಪಸ್ಥಿತಿಯ ವಿರುದ್ಧ ಹೋರಾಡುತ್ತಿದ್ದ ಮುಜಾಹಿದೀನ್ಗಳಿಗೆ ಸೌದಿ ಅರೆಬಿಯಾ ಮತ್ತು ಅಮೆರಿಕ ಒದಗಿಸಿದ ನೆರವು ಸ್ವಿಸ್ ಬ್ಯಾಂಕ್ನಲ್ಲಿರುವ ಅಮೆರಿಕದ ಗುಪ್ತಚರ ಏಜೆನ್ಸಿ ಸಿಐಎ ಖಾತೆಗೆ ಜಮೆ ಆಗುತ್ತಿತ್ತು ಮತ್ತು ಅಂತಿಮವಾಗಿ ಪಾಕ್ನ ಐಎಸ್ಐಗೆ ಪೂರೈಕೆಯಾಗುತ್ತಿತ್ತು ಎಂದು ವರದಿ ಹೇಳಿದೆ.

ಸರಕಾರಿ ಸಂಸ್ಥೆಗಳ ಮುಖ್ಯಸ್ಥರಾಗಿದ್ದ ಸಂದರ್ಭ ಸಂಗ್ರಹಿಸಿದ್ದ ಈ ಮೊತ್ತದ ಬಗ್ಗೆ ಪಾಕಿಸ್ತಾನ ಚುನಾವಣಾ ಆಯೋಗಕ್ಕೆ ಸಲ್ಲಿಸುವ ಆಸ್ತಿ ಘೋಷಣೆಯಲ್ಲಿ ಯಾವುದೇ ಉಲ್ಲೇಖ ಇರುವುದಿಲ್ಲ ಎಂದೂ ಪತ್ರಿಕೆ ವರದಿ ಮಾಡಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News