ಉತ್ತರ ಪ್ರದೇಶ: ಆದಿತ್ಯನಾಥ್ ಕಾರ್ಯಕ್ರಮ ನಡೆಯಬೇಕಿದ್ದ ಮೈದಾನದ ಸಮೀಪ ಬೀಡಾಡಿ ದನಗಳನ್ನು ಬಿಟ್ಟ ರೈತರು
ಬಾರಾಬಂಕಿ: ಬೀಡಾಡಿ ದನಗಳಿಂದ ಬೇಸತ್ತಿರುವ ಉತ್ತರ ಪ್ರದೇಶ ರೈತರು, ಬೀಡಾಡಿ ದನಗಳ ಸಮಸ್ಯೆ ಪರಿಹರಿಸದ ಆದಿತ್ಯನಾಥ್ ಸರ್ಕಾರದ ವಿರುದ್ಧ ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಲಕ್ನೋದಿಂದ 40 ಕಿಮೀ ದೂರದಲ್ಲಿರುವ ಬಾರಾಬಂಕಿ ಪ್ರದೇಶದಲ್ಲಿ ಸಿಎಂ ಆದಿತ್ಯನಾಥ್ ಪಾಲ್ಗೊಳ್ಳಬೇಕಿದ್ದ ರ್ಯಾಲಿ ನಡೆಯುವ ಮೈದಾನದ ಸಮೀಪ ಸಾವಿರಾರು ಸಂಖ್ಯೆಯಲ್ಲಿ ಬೀಡಾಡಿ ದನಗಳನ್ನು ಅಟ್ಟಿಸಿ ಬಿಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಟ್ವಿಟರಿನಲ್ಲಿ ವಿಡಿಯೋ ಹಂಚಿಕೊಂಡಿರುವ ರೈತ ಮುಖಂಡ ರಮಣದೀಪ್ ಸಿಂಗ್ ಮನ್, “ಆದಿತ್ಯನಾಥ್ ಅವರ ಕಾರ್ಯಕ್ರಮ ನಡೆಯುವುದಕ್ಕೂ ಮುನ್ನ ರೈತರು ತಮ್ಮ ಹೊಲಗಳಿಂದ ಹಾಗೂ ಸಮೀಪದಲ್ಲಿ ಅಲೆದಾಡುತ್ತಿದ್ದ ಸಾವಿರಾರು ಸಂಖ್ಯೆಯ ಬೀಡಾಡಿ ದನಗಳನ್ನು ಕಾರ್ಯಕ್ರಮ ನಡೆಯಬೇಕಿದ್ದ ಮೈದಾನದಲ್ಲಿ ಬಿಟ್ಟು ಹೋಗಿದ್ದಾರೆ. ಕಳೆದ ಐದು ವರ್ಷಗಳಿಂದ ಈ ಬೀಡಾಡಿ ದನಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈಗ ಈ ಸಮಸ್ಯೆಗೆ ಬಿಜೆಪಿ ಯಾವ ರೀತಿ ಪರಿಹಾರ ಕಂಡುಕೊಳ್ಳುತ್ತದೆ ಎಂದು ನೋಡಬೇಕು” ಎಂದು ಬರೆದಿದ್ದಾರೆ.
ಬಾರಬಂಕಿಯ ಸ್ಥಳೀಯ ಆಡಳಿತದಿಂದಾಗಲೀ ಸಿಎಂ ಆದಿತ್ಯನಾಥ್ ಅವರಿಂದಾಗಲಿ ಈ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆ ಬಂದಿಲ್ಲ ಎಂದು ndtv.com ವರದಿ ಮಾಡಿದೆ.
ಉತ್ತರಪ್ರದೇಶದಲ್ಲಿ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬೀಡಾಡಿ ದನಗಳ ಸಮಸ್ಯೆ ಪರಿಹರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಭರವಸೆ ನೀಡಿದ್ದರು. ಹಾಲು ಕೊಡದ ಗೊಡ್ಡು ಹಸುಗಳ ಹಾಗೂ ಎತ್ತುಗಳ ಸೆಗಣಿಯನ್ನು ವ್ಯಾವಹಾರಿಕವಾಗಿ ಬಳಸುವ ಮೂಲಕ ಈ ಸಮಸ್ಯೆಗೆ ಪರಿಹಾರ ನೀಡುವುದಾಗಿ ಪ್ರಧಾನಿ ಹೇಳಿದ್ದರು.
ಇದನ್ನೂ ಓದಿ: ಉದಯೋನ್ಮುಖ ಕ್ರಿಕೆಟಿಗನ ಶಸ್ತ್ರಚಿಕಿತ್ಸೆಗೆ 31 ಲಕ್ಷ ರೂ.ನೆರವು ನೀಡಿದ ಕೆ.ಎಲ್. ರಾಹುಲ್
बाराबंकी में C.M योगी के कार्यक्रम से पहले किसानों ने खेतों से खदेड़कर सैकड़ों सांड रैली स्थल में छोड़ दिये, किसानों से तो इन छुट्टा जानवरों का इलाज निकला नहीं, और 5 साल U.P सरकार ने भी कोई इलाज नहीं निकाला, अब देखना ये था की कार्यक्रम से पहले #BJP वाले क्या इलाज निकालते ! pic.twitter.com/EWth20fSbi
— Ramandeep Singh Mann (@ramanmann1974) February 22, 2022