‘ಸಂಸದ್ ರತ್ನ’ ಪ್ರಶಸ್ತಿ ಪ್ರಕಟ: ವೀರಪ್ಪ ಮೊಯ್ಲಿಗೆ ಜೀವಮಾನದ‌ ಸಾಧನೆ ಪ್ರಶಸ್ತಿ

Update: 2022-02-22 18:02 GMT
Photo: PTI

ಹೊಸದಿಲ್ಲಿ: ಎನ್‌ಸಿಪಿಯ ಸುಪ್ರಿಯಾ ಸುಳೆ ಹಾಗೂ ಬಿಜೆಡಿಯ ಅಮರ್ ಪಟ್ನಾಯಕ್ ಸೇರಿದಂತೆ 11 ಮಂದಿ ಸಂಸತ್ ಸದಸ್ಯರು 2022ರ ಸಾಲಿನ ‘ಸಂಸದ್ ರತ್ನ’ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ತಮಿಳುನಾಡಿನ ಹಿರಿಯ ಬಿಜೆಪಿ ನಾಯಕ ಎಚ್.ವಿ. ಹಂದೆ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಂ. ವೀರಪ್ಪ ಮೊಯ್ಲಿ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿಗೆ ನಾಮಕರಣಗೊಳಿಸಲಾಗಿದೆ. 

ಇದರೊಂದಿಗೆ ಕೃಷಿ, ವಿತ್ತ, ಶಿಕ್ಷಣ ಹಾಗೂ ಕಾರ್ಮಿಕ ಇಲಾಖೆಗಳ ನಾಲ್ಕು ಸಂಸದೀಯ ಸ್ಥಾಯಿ ಸಮಿತಿಗಳಿಗೆ ಅವು ನೀಡಿದ ಕೊಡುಗೆಗಾಗಿ ಪುರಸ್ಕಾರವನ್ನು ಘೋಷಿಸಲಾಗಿದೆ ಎಂದು ಪ್ರೈಮ್ ಪಾಯಿಂಟ್ ಫೆಡರೇಶನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
12ನೇ ಆವೃತ್ತಿಯ ಸಂಸದ್ ರತ್ನ ಪುರಸ್ಕಾರಗಳನ್ನು ಹೊಸದಿಲ್ಲಿಯಲ್ಲಿ ಫೆಬ್ರವರಿ 26ರಂದು ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಪ್ರಧಾನ ಮಾಡಲಾಗುವುದು.
ಸದನದಲ್ಲಿ ಅಸಾಧಾರಣವಾದ ನಿರ್ವಹಣೆಯನ್ನು ಪ್ರದರ್ಶಿಸಿದ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ಕ್ರಾಂತಿಕಾರಿ ಸಮಾಜವಾದಿ ಪಕ್ಷದ (ಆರ್‌ಎಸ್‌ಪಿ) ಸಂಸದ ಎನ್.ಕೆ. ರಾಮಚಂದ್ರನ್ ಹಾಗೂ ಶಿವಸೇನಾ ಸಂಸದ ಶಿರಾಂಗ್ ಅಪ್ಪಾ ಬಾರ್ನೆ ಅವರಿಗೆ ಸಂಸದ್ ವಿಶಿಷ್ಟ ಪುರಸ್ಕಾರವನ್ನು ಘೋಷಿಸಲಾಗಿದೆ.


 ಟಿಎಂಸಿ ಸಂಸದ ಸೌಗತಾ ರಾಯ್ (ಪಶ್ಚಿಮಬಂಗಾಳ), ಕಾಂಗ್ರೆಸ್ ಸಂಸದ ಕುಲದೀಪ್ ರಾಯ್ ಶರ್ಮಾ (ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ) ಹಾಗೂ ಬಿಜೆಪಿ ಸಂಸದರಾದ ಬಿದ್ಯುತ್ ಬಾರಾನ್ ಮಹಾತೊ (ಜಾರ್ಖಂಡ್), ಹೀನಾ ವಿಜಯಕುಮಾರ್ ಗಾವಿತ್ (ಮಹಾರಾಷ್ಟ್ರ) ಹಾಗೂ ಸುಧೀರ್ ಗುಪ್ತಾ (ಮಧ್ಯಪ್ರದೇಶ) ಅವರು 17ನೇ ಲೋಕಸಭೆಯ ಕಲಾಪಗಳಲ್ಲಿ ತೋರಿದ ನಿರ್ವಹಣೆಗಾಗಿ ಅವರಿಗೆ ಸಂಸದ್ ರತ್ನ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ ಎಂದು ಪ್ರೈಮ್ ಪಾಯಿಂಟ್ ಪ್ರತಿಷ್ಠಾನದ ತೀರ್ಪುಗಾರರ ಸಮಿತಿ ತಿಳಿಸಿದೆ.

ರಾಜ್ಯಸಭೆಯಲ್ಲಿ ಬಿಜು ಜನತಾದಳದ ಸಂಸದ ಅಮರ್ ಪಟ್ನಾಯಕ್ (ಒಡಿಶಾ) ಹಾಗೂ ಎನ್‌ಸಿಪಿ ಸಂಸದೆ ಫೌಝಿಯಾ ತಹಸೀನ್ ಅಹ್ಮದ್ ಖಾನ್ (ಮಹಾರಾಷ್ಟ್ರ) ಅವರಿಗೆ 2021ರಲ್ಲಿ ಸದನದಲ್ಲಿ ತೋರಿದ ನಿರ್ವಹಣೆಗಾಗಿ ಹಾಲಿ ಸದಸ್ಯರ ಶ್ರೇಣಿಯಲ್ಲಿ ಪ್ರಶಸ್ತಿಗೆ ಅರ್ಹರಾಗಿದ್ದಾರೆ.
2021ರಲ್ಲಿ ನಿವೃತ್ತರಾದ ಸದಸ್ಯರ ಶ್ರೇಣಿಯಲ್ಲಿ, ರಾಜ್ಯಸಭೆಯಲ್ಲಿ ಪೂರ್ಣಾವಧಿಯಲ್ಲಿ ಪ್ರದರ್ಶಿಸಿದ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಕೇರಳದ ಮಾಜಿ ಸಿಪಿಎಂ ಸಂಸದ ಕೆ.ಕೆ.ರಾಗೇಶ್ ಅವರಿಗೆ ಪುರಸ್ಕಾರವನ್ನು ಘೋಷಿಸಲಾಗಿದೆ.


 17ನೇ ಲೋಕಸಭೆಯ ಆರಂಭದಿಂದ ಹಿಡಿದು 2021ರ ಚಳಿಗಾಲದ ಅಧಿವೇಶನದ ಕೊನೆಯವರೆಗಿನ ಅವಧಿಯಲ್ಲಿ ಸದನದಲ್ಲಿ ಅವರ ಒಟ್ಟು ಕಾರ್ಯನಿರ್ವಹಣೆಯ ಆಧಾರದಲ್ಲಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಸಂಸದ್ ರತ್ನ ಪುರಸ್ಕಾರ ಸಮಿತಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘವಾಲ್ ಅಧ್ಯಕ್ಷರಾಗಿದ್ದು, ಭಾರತೀಯ ಚುನಾವಣಾ ಆಯೋಗದ ಮಾಡಿ ಅಧ್ಯಕ್ಷ ಟಿ.ಎಸ್.ಕೃಷ್ಣಮೂರ್ತಿ ಉಪಾಧ್ಯಕ್ಷರಾಗಿರುವರು.


ಸದನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಸದರನ್ನು ಗೌರವಿಸಲು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ನೀಡಿದ್ದ ಸಲಹೆಯಂತೆ ಸಂಸದ್‌ ರತ್ನ ಪ್ರಶಸ್ತಿಯನ್ನು ಆರಂಭಿಸಲಾಗಿತ್ತು. ಮೊದಲನೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಚೆನ್ನೈನಲ್ಲಿ 2010ರಲ್ಲಿ ಆರಂಭವಾಗಿತ್ತು. ಸ್ವತಃ ಕಲಾಂ ಅವರು ಈ ಉಪಕ್ರಮಕ್ಕೆ ಚಾಲನೆ ನೀಡಿದ್ದರು. ಈತನಕ ಉನ್ನತ ಮಟ್ಟದ ಕಾರ್ಯನಿರ್ವಹಣೆಯ 75 ಮಂದಿ ಸಂಸದರನ್ನು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ ಎಂದು ಪ್ರತಿಷ್ಠಾನವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News