ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಚಿವ ನವಾಬ್ ಮಲಿಕ್ ರನ್ನು ಪ್ರಶ್ನಿಸಿದ ಇಡಿ
ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಗಾಡಿ ಸರಕಾರ ಹಾಗೂ ಕೇಂದ್ರದ ನಡುವಿನ ಮಾತಿನ ಚಕಮಕಿಯ ನಡುವೆ ರಾಜ್ಯದ ಸಚಿವ ನವಾಬ್ ಮಲಿಕ್ ಅವರನ್ನು ಇಂದು ಬೆಳಿಗ್ಗೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಕರೆದೊಯ್ಯಲಾಯಿತು.
ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಬೆಳಿಗ್ಗೆ 6 ಗಂಟೆಗೆ ಎನ್‌ಸಿಪಿ ನಾಯಕನ ಮನೆಗೆ ತಲುಪಿದರು. ಅಲ್ಲಿ ಅವರನ್ನು ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಆ ನಂತರ ಬೆಳಗ್ಗೆ 7:30ಕ್ಕೆ ಇಡಿ ಕಚೇರಿಗೆ ಕರೆತಂದಿದ್ದು, 8:30ರಿಂದ ವಿಚಾರಣೆ ನಡೆಸಲಾಗುತ್ತಿದೆ.
ಮುಂಬೈ ಭೂಗತ ಜಗತ್ತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಿಕ್ ಅವರಿಗೆ ಇಡಿ ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ ಮಲಿಕ್ ಅವರು ರಾಜ್ಯ ಸರಕಾರವನ್ನು ಉರುಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಮತ್ತು ಶಿವಸೇನೆ ಮಹಾರಾಷ್ಟ್ರದಲ್ಲಿ ಆಡಳಿತವನ್ನು ಮುಂದುವರಿಸುವುದು ಮಾತ್ರವಲ್ಲದೆ ಬಿಜೆಪಿಯನ್ನು ಕಿತ್ತೊಗೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದರು.