ಆಂಧ್ರ: ಹಾಸ್ಟೆಲ್ ಆಹಾರ ಸೇವಿಸಿದ ಕನಿಷ್ಠ 30 ವಿದ್ಯಾರ್ಥಿನಿಯರು ಅಸ್ವಸ್ಥ
ಅಮರಾವತಿ: ಆಂಧ್ರದ ಚಿತ್ತೂರು ಜಿಲ್ಲೆಯ ತಮ್ಮ ಹಾಸ್ಟೆಲ್‌ನಲ್ಲಿ ಮಧ್ಯಾಹ್ನದ ಊಟದ ನಂತರ ಕನಿಷ್ಠ 30 ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ತೂರು ಜಿಲ್ಲೆಯ ಕುಪ್ಪಂ ಪುರಸಭೆಯ ಅಕ್ಕ ಮಹಾದೇವಿ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.
ಹಾಸ್ಟೆಲ್‌ನಲ್ಲಿ ಮಧ್ಯಾಹ್ನದ ಊಟದ ವೇಳೆ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಶಂಕೆ ವ್ಯಕ್ತವಾಗಿದೆ.
ಕುಪ್ಪಂ ಆಂಧ್ರಪ್ರದೇಶದ ವಿರೋಧ ಪಕ್ಷದ ನಾಯಕ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಕ್ಷೇತ್ರವಾಗಿದೆ.
ಸುಮಾರು 30 ವಿದ್ಯಾರ್ಥಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, 17 ವಿದ್ಯಾರ್ಥಿಗಳನ್ನು ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂತ್ರಸ್ತರಿಗೆ ಸೂಕ್ತ ಮತ್ತು ಸಮರ್ಪಕ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸರಕಾರವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.