ಸತ್ಯವನ್ನು ಒಪ್ಪಿಕೊಂಡಿರುವುದು ಅಮಿತ್ ಶಾ ಅವರ ದೊಡ್ಡತನ: ಮಾಯಾವತಿ

Update: 2022-02-23 07:00 GMT

ಲಕ್ನೋ: ಉತ್ತರ ಪ್ರದೇಶ ಚುನಾವಣಾ ಫಲಿತಾಂಶಕ್ಕೆ ವಾರಗಳು ಬಾಕಿ ಇರುವಾಗಲೇ ಮಾಜಿ ಮುಖ್ಯಮಂತ್ರಿ ಮಾಯಾವತಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ನಡುವಿನ ಮಾತಿನ ವೈಖರಿ ಗಮನ ಸೆಳೆದಿದೆ.

ಗೃಹ ಸಚಿವ ಅಮಿತ್ ಶಾ ಅವರು ತಮ್ಮನ್ನು ಕಡೆಗಣಿಸುವಂತಿಲ್ಲ ಎಂಬ ಹೊಗಳಿಕೆಯ ಮಾತಿಗೆ ಪ್ರತಿಕ್ರಿಯಿಸುವಂತೆ ಕೇಳಿದಾಗ, "ಅವರು ಸತ್ಯವನ್ನು ಒಪ್ಪಿಕೊಂಡಿರುವುದು ಅವರ ದೊಡ್ಡತನ’’ ಎಂದು ಮಾಯಾವತಿ ಹೇಳಿದರು.

"ಆದರೆ ನಾನು ಅವರಿಗೆ ಹೇಳಲು ಬಯಸುತ್ತೇನೆ - ಉತ್ತರಪ್ರದೇಶದಲ್ಲಿ ನಡೆದ ಮೂರು ಹಂತದ ಚುನಾವಣೆಗಳಲ್ಲಿ ಬಿಎಸ್ಪಿ (ಬಹುಜನ ಸಮಾಜ ಪಕ್ಷ) ಕೇವಲ ದಲಿತ ಮತ್ತು ಮುಸ್ಲಿಂ ಮತಗಳನ್ನು ಪಡೆದಿಲ್ಲ. ಆದರೆ ನಾವು ಮೇಲ್ಜಾತಿ ಮತ್ತು ಹಿಂದುಳಿದ ಜಾತಿಗಳ ಮತಗಳನ್ನು ಸಹ ಪಡೆಯುತ್ತಿದ್ದೇವೆ. ನಾನು ಅದನ್ನು ಅವರಿಗೆ ಹೇಳಲು ಬಯಸುತ್ತೇನೆ’’ ಎಂದರು.

403 ಸದಸ್ಯ ಬಲದ ಉತ್ತರಪ್ರದೇಶದ ಅಸೆಂಬ್ಲಿಯಲ್ಲಿ 300 ದಾಟುವ ಬಿಜೆಪಿಯ ಹೇಳಿಕೆಗೆ ಉತ್ತರಿಸಿದ ಮಾಯಾವತಿ "ಎಲ್ಲವನ್ನು ಸಮಯವೇ ಹೇಳುತ್ತದೆ. ಯಾರಿಗೆ ಗೊತ್ತು, ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಬದಲಿಗೆ ಬಿಎಸ್ಪಿ ಗೆಲ್ಲಬಹುದು’’ ಎಂದರು.

ಯುಪಿಯ ಮತದಾರರು ಸಮಾಜವಾದಿ ಪಕ್ಷವನ್ನು ಈಗಾಗಲೇ ತಿರಸ್ಕರಿಸಿದ್ದಾರೆ, ಏಕೆಂದರೆ ಆ ಪಕ್ಷವು ಅಧಿಕಾರಕ್ಕೆ ಬಂದಾಗಲೆಲ್ಲಾ ಗೂಂಡಾ ರಾಜ್ (ಅಪರಾಧ) ನಡೆಯುತ್ತಿದೆ ಎಂದು ಮಾಯಾವತಿ ಸುದ್ದಿಗಾರರಿಗೆ ತಿಳಿಸಿದರು.

ಮಂಗಳವಾರ  ಅಮಿತ್ ಶಾ ಅವರು ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಮಾಯಾವತಿಯವರ ಪ್ರಸ್ತುತತೆ ಕಳೆದುಹೋಗಿಲ್ಲ ಎಂದು ಹೇಳಿದ್ದರು.

ದಲಿತ  ಹಾಗೂ  ಮುಸ್ಲಿಂ ಮತಗಳನ್ನು ಬಿಎಸ್‌ಪಿ ಕಿತ್ತುಕೊಳ್ಳುವುದು ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷಕ್ಕೆ ಸಹಾಯ ಮಾಡುತ್ತದೆಯೇ ಎಂದು ಹಿರಿಯ ಬಿಜೆಪಿ ನಾಯಕನನ್ನು ಕೇಳಲಾಯಿತು. "ಇದು ಬಿಜೆಪಿಗೆ ಲಾಭವೋ ಅಥವಾ ನಷ್ಟವೋ ನನಗೆ ಗೊತ್ತಿಲ್ಲ. ಇದು ಸೀಟಿನ ಮೇಲೆ ಅವಲಂಬಿತವಾಗಿದೆ ... ಆದರೆ ಮಾಯಾವತಿ ಅವರ ಪ್ರಸ್ತುತತೆ ಮುಗಿದಿದೆ ಎನ್ನುವ ಅಂಶದಲ್ಲಿ ಸತ್ಯಾಂಶವಿಲ್ಲ" ಎಂದು ಅಮಿತ್ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News