×
Ad

ರಾಷ್ಟ್ರಗೀತೆ ಹಾಡುವಂತೆ ಬಲವಂತಪಡಿಸಿ ಯುವಕನ ಕೊಲೆ ಪ್ರಕರಣ: ಪೊಲೀಸ್‌ ತನಿಖಾ ವಿಧಾನದ ಕುರಿತು ಹೈಕೋರ್ಟ್‌ ಅಸಮಾಧಾನ

Update: 2022-02-23 14:12 IST

ಹೊಸದಿಲ್ಲಿ,ಫೆ.23: ಈಶಾನ್ಯ ದಿಲ್ಲಿಯಲ್ಲಿ 2020ರಲ್ಲಿ ನಡೆದಿದ್ದ ಕೋಮು ಹಿಂಸಾಚಾರದ ಸಂದರ್ಭದಲ್ಲಿ 23 ಹರೆಯದ ಮುಸ್ಲಿಂ ಯುವಕನ ಸಾವಿನ ಕುರಿತು ನಡೆಸಲಾದ ತನಿಖೆ ವಿವರಗಳಿರುವ ದಿಲ್ಲಿ ಪೊಲೀಸರ ಸ್ಥಿತಿಗತಿ ವರದಿಯಲ್ಲಿ ಗಣನೀಯವಾಗಿರುವುದು ಏನೂ ಇಲ್ಲ ಎಂದು ಅಭಿಪ್ರಾಯಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯವು,ಈ ಸಂಬಂಧ ಪೊಲೀಸರನ್ನು ಕಟುವಾಗಿ ಟೀಕಿಸಿದೆ.

ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಹಿಂಸಾಚಾರದ ಬಳಿಕ 2020,ಫೆ.23 ಮತ್ತು 26 ನಡುವೆ ಸಂಭವಿಸಿದ್ದ ದಂಗೆಗಳಲ್ಲಿ 53 ಜನರು ಕೊಲ್ಲಲ್ಪಟ್ಟು, ನೂರಾರು ಜನರು ಗಾಯಗೊಂಡಿದ್ದರು. ಮೃತರಲ್ಲಿ ಕನಿಷ್ಠ 38 ಜನರು ಮುಸ್ಲಿಮರಾಗಿದ್ದರು. ಫೈಝಾನ್ ಮತ್ತು ಇತರ ನಾಲ್ವರನ್ನು ರಾಷ್ಟ್ರಗೀತೆಯನ್ನು ಹಾಡುವಂತೆ ಮತ್ತು ‘ವಂದೇ ಮಾತರಂ’ ಹೇಳುವಂತೆ ಆದೇಶಿಸಿದ್ದ ಪೊಲೀಸರು ಅವರನ್ನು ಥಳಿಸುತ್ತಿದ್ದನ್ನು 2020,ಫೆ.24ರಂದು ಚಿತ್ರೀಕರಿಸಲಾಗಿದ್ದ ವೀಡಿಯೊ ತೋರಿಸಿತ್ತು. ಬಳಿಕ ಫೈಝಾನ್ನನ್ನು ಜ್ಯೋತಿನಗರ ಠಾಣೆಯಲ್ಲಿ ಕೂಡಿಹಾಕಿದ್ದು,ಬಿಡುಗಡೆಗೊಂಡ ಬೆನ್ನಿಗೇ ಆತ ಮೃತಪಟ್ಟಿದ್ದ.

ಮಂಗಳವಾರ ಪೊಲೀಸರು ತಮ್ಮ ತನಿಖೆಯ ಕುರಿತು ಸ್ಥಿತಿಗತಿ ವರದಿಯನ್ನು ಮೊಹರ್ಬಂದ್ ಲಕೋಟೆಯಲ್ಲಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಶೇಷ ತನಿಖಾ ತಂಡದಿಂದ ವಿಚಾರಣೆಯನ್ನು ಕೋರಿ ಫೈಝಾನ್ ತಾಯಿ ಕಿಸ್ಮತುನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪೊಲೀಸರು ತನ್ನ ಮಗನನ್ನು ಅಕ್ರಮವಾಗಿ ಬಂಧಿಸಿದ್ದರು ಮತ್ತು ಆತನಿಗೆ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ್ದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದ ಎಂದು ಕಿಸ್ಮತುನ್ ಪ್ರತಿಪಾದಿಸಿದ್ದಾರೆ.
ಪೊಲೀಸರು ಸಲ್ಲಿಸಿರುವ ಸ್ಥಿತಿಗತಿಯಲ್ಲಿ ವರದಿಯಲ್ಲಿ ಏನೂ ಇಲ್ಲ ಎಂದು ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ನ್ಯಾ.ಮುಕ್ತಾ ಗುಪ್ತಾ ಟೀಕಿಸಿದರು.

ಆದೇಶವಿಲ್ಲದಿದ್ದರೂ ಪೊಲೀಸರು ಮೊಹರ್ಬಂದ್ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸಿದ್ದಾರೆ ಎಂದು ಅರ್ಜಿದಾರರ ಪರ ನ್ಯಾಯವಾದಿ ವೃಂದಾ ಗ್ರೋವರ್ ಆಕ್ಷೇಪಿಸಿದ ಬಳಿಕ ವರದಿಯನ್ನು ಅವರೊಂದಿಗೆ ಹಂಚಿಕೊಳ್ಳುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿತು.

ವರದಿಯಲ್ಲಿ ಪ್ರಕರಣದ ತನಿಖೆ ಮತ್ತು ಆರೋಪಿಗಳ ವಿವರಗಳಿರುವುದರಿಂದ ಅದನ್ನು ಮೊಹರ್ಬಂದ್ ಲಕೋಟೆಯಲ್ಲಿ ಸಲ್ಲಿಸಲಾಗಿದೆ ಎಂದು ಪೊಲೀಸರು ಸಮಜಾಯಿಷಿ ನೀಡಿದರು. ಫೈಝಾನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ಮೊದಲಿನ ವೈದ್ಯಕೀಯ ವರದಿಯಲ್ಲಿ ಆತನ ಶರೀರದಲ್ಲಿ ಕೇವಲ ಮೂರು ಗಾಯಗಳನ್ನು ಉಲ್ಲೇಖಿಸಲಾಗಿತ್ತು, ಆತನ ಮರಣೋತ್ತರ ಪರೀಕ್ಷಾ ವರದಿಯಲ್ಲಿ 20 ಗಾಯಗಳನ್ನು ಏಕೆ ತೋರಿಸಲಾಗಿದೆ ಎನ್ನುವುದನ್ನು ವಿವರಿಸುವಂತೆ ನ್ಯಾ.ಗುಪ್ತಾ ಪೊಲೀಸರಿಗೆ ಸೂಚಿಸಿದರು.
ಫೈಝಾನ್ ಜೊತೆಗೆ ಥಳಿಸಲ್ಪಟ್ಟಿದ್ದ ಮತ್ತು ಸಾಕ್ಷಿಗಳಾಗಿರುವ ಇತರ ನಾಲ್ವರ ಹೇಳಿಕೆಗಳನ್ನು ಏಕೆ ದಾಖಲಿಸಿಕೊಂಡಿರಲಿಲ್ಲ ಎಂದು ಪೊಲೀಸರನ್ನು ಪ್ರಶ್ನಿಸಿದ ನ್ಯಾಯಾಲಯವು,ಈ ಪ್ರಕರಣದಲ್ಲಿ ನೀವು ಪ್ರತ್ಯಕ್ಷದರ್ಶಿಗಳ ನೆರವನ್ನು ಪಡೆದಿಲ್ಲ,ಬೇಕಾಬಿಟ್ಟಿಯಾಗಿ ನಡೆದುಕೊಂಡಿದ್ದೀರಿ ಎಂದು ಕುಟುಕಿತು.

ಥಳಿತದ ನಂತರ ಸಾಯುವ ಸ್ಥಿತಿಯಲ್ಲಿದ್ದ ಫೈಝಾನ್ನನ್ನು ರಾತ್ರಿಯಿಡೀ ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು ಎಂದು ಹೇಳಿದ ಗ್ರೋವರ್,ಜ್ಯೋತಿನಗರ ಪೊಲೀಸ್ ಠಾಣೆಯ ಡ್ಯೂಟಿ ರೋಸ್ಟರ್ನಂತಹ ದಾಖಲೆಗಳನ್ನು ಪೊಲೀಸರು ಸೀಲ್ ಮಾಡಿರಲಿಲ್ಲ ಮತ್ತು ಅಂದು ರಾತ್ರಿ ಕರ್ತವ್ಯದಲ್ಲಿದ್ದವರನ್ನು ಪ್ರಶ್ನಿಸಿಲ್ಲ ಎಂದು ಆರೋಪಿಸಿದರು.
 
ವೀಡಿಯೊದ ಮೂಲವನ್ನು ಏಕೆ ಪತ್ತೆ ಹಚ್ಚಲಿಲ್ಲ ಎಂದೂ ನ್ಯಾ.ಗುಪ್ತಾ ಪೊಲೀಸರನ್ನು ಪ್ರಶ್ನಿಸಿದರು. ಇದಕ್ಕೆ ತನಿಖಾಧಿಕಾರಿ ಪಂಕಜ್ ಅರೋರಾ ಅವರು,ಹೆಡ್ ಕಾನ್ಸ್ಟೇಬಲ್ ಫೋನ್ನಿಂದ ವೀಡಿಯೊವನ್ನು ಚಿತ್ರೀಕರಿಸಲಾಗಿತ್ತು ಎನ್ನುವುದು ಗೊತ್ತಾಗಿದೆ,ಆದರೆ ವಿಚಾರಣೆ ಸಂದರ್ಭ ವೀಡಿಯೊವನ್ನು ಚಿತ್ರೀಕರಿಸಿದ್ದನ್ನು ಅವರು ನಿರಾಕರಿಸಿದ್ದಾರೆ ಎಂದು ಉತ್ತರಿಸಿದರು. ಪ್ರಕರಣದ ಮುಂದಿನ ವಿಚಾರಣೆಯು ಮಾ.15ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News