ಈಶಾನ್ಯ ದಿಲ್ಲಿ ಹಿಂಸಾಚಾರ: ಇಲ್ಲಿಯವರೆಗೆ 2,456 ಮಂದಿ ಆರೋಪಿಗಳ ಬಂಧನ; ಪೊಲೀಸರಿಂದ ಮಾಹಿತಿ

Update: 2022-02-23 08:48 GMT

ಹೊಸದಿಲ್ಲಿ: ಈಶಾನ್ಯ ದಿಲ್ಲಿ ಹಿಂಸಾಚಾರ ಕುರಿತಂತೆ 2,456 ಮಂದಿಯನ್ನು ಬಂಧಿಸಲಾಗಿದೆ ಹಾಗೂ ಶೇ 52ರಷ್ಟು ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ ಎಂದು ಹಿಂಸಾಚಾರ ನಡೆದು ಎರಡು ವರ್ಷಗಳ ನಂತರ ದಿಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಚಾರ್ಜ್‍ಶೀಟ್‍ಗಳಲ್ಲಿ 1,610 ಆರೋಪಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಬಂಧಿತರ ಪೈಕಿ 411 ಮಂದಿಯನ್ನು ಎಸ್‍ಐಟಿ ಮತ್ತು 21 ಮಂದಿಯನ್ನು ವಿಶೇಷ ಸೆಲ್ ಬಂಧಿಸಿದೆ ಹೆಚ್ಚಿನವರು ಈಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಆರೋಪಿಗಳ ಪೈಕಿ 798 ಮಂದಿ ಹಿಂದುಗಳು ಹಾಗೂ 812 ಮಂದಿ ಮುಸ್ಲಿಮರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇಲ್ಲಿಯ ತನಕ  ಶೇ 58ಕ್ಕೂ ಹೆಚ್ಚು ಪ್ರಕರಣಗಳನ್ನು ಬೇಧಿಸಲಾಗಿದೆ. ಇವುಗಳಲ್ಲಿ 384 ಪ್ರಕರಣಗಳನ್ನು ಸ್ಥಳೀಯ ಪೊಲೀಸರು, 45 ಪ್ರಕರಣಗಳನ್ನು ಎಸ್‍ಐಟಿ ಮತ್ತು ಒಂದು ಪ್ರಕರಣವನ್ನು ವಿಶೇಷ ಘಟಕ ಬೇಧಿಸಿದೆ.

ಇಲ್ಲಿಯ ತನಕ ಒಟ್ಟು 389 ಚಾರ್ಜ್‍ಶೀಟ್‍ಗಳನ್ನು ಸಲ್ಲಿಸಲಾಗಿದ್ದು, 315 ಪೂರಕ ಚಾರ್ಜ್‍ಶೀಟ್‍ಗಳನ್ನೂ ಸಲ್ಲಿಸಲಾಗಿದೆ.

ಫೆಬ್ರವರಿ 23 ಹಾಗೂ 25, 2020 ನಡುವೆ ನಡೆದ ಹಿಂಸಾಚಾರದಲ್ಲಿ 53 ಮಂದಿ ಮೃತಪಟ್ಟಿದ್ದರೆ 581ಕ್ಕೂ ಅಧಿಕ ಗಾಯಗೊಂಡಿದ್ದರು. ಮೃತರ ಪೈಕಿ ಐಬಿ ಅಧಿಕಾರಿ ಅಂಕಿತ್ ಶರ್ಮ ಹಾಗೂ ಹೆಡ್ ಕಾನ್‍ಸ್ಟೇಬಲ್ ರತ್ತನ್ ಲಾಲ್ ಕೂಡ ಸೇರಿದ್ದರು.

ಸ್ಥಳೀಯ ಪೊಲೀಸರು, ಕ್ರೈಂ ಬ್ರ್ಯಾಂಚ್ ಮತ್ತು ವಿಶೇಷ ಸೆಲ್ ಪೊಲೀಸರು ಒಟ್ಟು 758 ಪ್ರಕರಣಗಳನ್ನು ದಾಖಲಿಸಿದ್ದರು, ವಿಶೇಷ ತನಿಖಾ ತಂಡ ಮತ್ತು  ಕ್ರೈಂ ಬ್ರ್ಯಾಂಚ್ ಹತ್ಯೆ ಪ್ರಕರಣಗಳನ್ನು ತನಿಖೆ ನಡೆಸುತ್ತಿದ್ದರೆ, ಉಳಿದಂತೆ ವಿಶೇಷ ಸೆಲ್, ಈ ಹಿಂಸಾಚಾರದ ಹಿಂದಿನ ಸಂಚನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News