ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನ

Update: 2022-02-23 16:35 GMT

ಮುಂಬೈ,ಫೆ.23: ದೇಶಭ್ರಷ್ಟ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರು ಭಾಗಿಯಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈ.ಡಿ.)ವು ಬುಧವಾರ ಮಹಾರಾಷ್ಟ್ರದ ಸಚಿವ ಹಾಗೂ ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ಬಂಧಿಸಿದೆ.

ಈ.ಡಿ.ಕಚೇರಿಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್,‘ನನ್ನನ್ನು ಬಂಧಿಸಲಾಗಿದೆ,ಆದರೆ ಹೆದರುವುದಿಲ್ಲ. ನಾವು ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ ’ ಎಂದು ಹೇಳಿದರು.ಬಂಧನದ ಬಳಿಕ ಈ.ಡಿ.ಅಧಿಕಾರಿಗಳು ಜೆಜೆ ಆಸ್ಪತ್ರೆಯಲ್ಲಿ ಮಲಿಕ್ ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದರು.

ಬುಧವಾರ ಬೆಳಿಗ್ಗೆ ಮಲಿಕ್ ನಿವಾಸಕ್ಕೆ ಆಗಮಿಸಿದ್ದ ಈ.ಡಿ.ಅಧಿಕಾರಿಗಳು ಅವರನ್ನು ವಿಚಾರಣೆಗಾಗಿ ತಮ್ಮ ಕಚೇರಿಗೆ ಕರೆದೊಯ್ದಿದ್ದರು. ಮಲಿಕ್ ಪುತ್ರ ನ್ಯಾಯವಾದಿ ಆಮಿರ್ ಮಲಿಕ್ ಅವರ ಜೊತೆಯಲ್ಲಿದ್ದರು.

ಹಫ್ತಾ ವಸೂಲಿ,ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ಇತರ ಪ್ರಕರಣಗಳಲ್ಲಿ ಅಕ್ರಮ ಹಣ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ದಾವೂದ್,ಆತನ ಸಹಚರರಾದ ಇಕ್ಬಾಲ್ ಮಿರ್ಚಿ,ಛೋಟಾ ಶಕೀಲ್ ಮತ್ತು ಜಾವೇದ್ ಚಿಕ್ಣಾ ವಿರುದ್ಧ ಈ.ಡಿ.ತನಿಖೆ ನಡೆಸುತ್ತಿದೆ.
ಎನ್ಐಎ ಈ ತಿಂಗಳ ಪೂರ್ವಾರ್ಧದಲ್ಲಿ ದಾವೂದ್ ಮತ್ತು ಆತನ ಸಹಚರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ದಾಖಲಿಸಿಕೊಂಡಿರುವ ಪ್ರಕರಣದ ಆಧಾರದಲ್ಲಿ ಈ.ಡಿ.ತನಿಖೆಯನ್ನು ನಡೆಸುತ್ತಿದೆ.

ಈ ನಡುವೆ ಎನ್ಸಿಪಿ ಮುಖ್ಯಸ್ಥ ಶರದ ಪವಾರ್ ಅವರು,ಮಲಿಕ್ರನ್ನು ಈ.ಡಿ. ಬಂಧಿಸಿರುವುದು ಕೇಂದ್ರೀಯ ಏಜೆನ್ಸಿಗಳ ದುರ್ಬಳಕೆ ಕುರಿತು ಮಾತನಾಡುವ ಜನರಿಗೆ ಕಿರುಕುಳ ನೀಡುವ ಪ್ರಯತ್ನವಾಗಿದೆ. ಮುಸ್ಲಿಂ ಕಾರ್ಯಕರ್ತ ತಮ್ಮ ವಿರೋಧಿಯಾಗಿದ್ದರೆ ಆತನನ್ನು ದಾವೂದ್ ಹೆಸರಿನೊಂದಿಗೆ ತಳುಕು ಹಾಕುವುದು ಅವರ ಚಟವಾಗಿದೆ ಎಂದಿದ್ದಾರೆ.

ಈ.ಡಿ.ಯಾವುದೇ ನೋಟಿಸ್ ಅಥವಾ ಸಮನ್ಸ್ ನೀಡದೆ ಮಲಿಕ್ರನ್ನು ವಿಚಾರಣೆಗೆ ಕರೆದೊಯ್ದಿತ್ತು ಎಂದು ಆರೋಪಿಸಿದ ಎನ್ಸಿಪಿಯ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಜಯಂತ ಪಾಟೀಲ್ ಅವರು,ಇದು ಕೇಂದ್ರೀಯ ಏಜೆನ್ಸಿಗಳ ದುರ್ಬಳಕೆಯಲ್ಲದೆ ಬೇರೇನೂ ಅಲ್ಲ. ಕೇಂದ್ರ ಸರಕಾರದ ನೀತಿಗಳು ಮತ್ತು ಕೇಂದ್ರೀಯ ಸಂಸ್ಥೆಗಳ ಅಧಿಕಾರ ದುರುಪಯೋಗದ ವಿರುದ್ಧ ಮಲಿಕ್ ಕಟು ಟೀಕಾಕಾರರಾಗಿದ್ದರು ಮತ್ತು ಇದೇ ಕಾರಣದಿಂದ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದರು.

ಈ.ಡಿ.ಕ್ರಮವು ಮಹಾರಾಷ್ಟ್ರಕ್ಕೆ ಅಪಮಾನವಾಗಿದೆ ಎಂದು ಎನ್ಸಿಪಿ ಸಂಸದೆ ಸುಪ್ರಿಯಾ ಸುಲೆ ಆಕ್ರೋಶ ವ್ಯಕ್ತಪಡಿಸಿದರು. ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಭಾಗಿಯಾಗಿದ್ದ ಐಷಾರಾಮಿ ಹಡಗಿನ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಿಕ್ ಬಿಜೆಪಿ ನಾಯಕರು ಮತ್ತು ಎನ್ಸಿಬಿಯ ವಲಯ ನಿರ್ದೇಶಕರಾಗಿದ್ದ ಸಮೀರ್ ವಾಂಖೆಡೆ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News