×
Ad

ಫೆ.27ರಂದು ಪಲ್ಸ್ ಪೋಲಿಯೊ ಅಭಿಯಾನ: ದ.ಕ. ಜಿಲ್ಲೆಯಲ್ಲಿ 1,54,023 ಮಕ್ಕಳಿಗೆ ಲಸಿಕೆ ಹಾಕುವ ಗುರಿ

Update: 2022-02-23 15:55 IST

ಮಂಗಳೂರು, ಫೆ. 23: ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಫೆ.27ರಂದು ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಬೆಳಗ್ಗೆ 8 ಗಂಟೆಗೆ ಅಭಿಯಾನಕ್ಕೆ ಚಾಲನೆ ದೊರೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಐದು ವರ್ಷದೊಳಗನ ಪ್ರತಿಯೊಂದು ಮಗುವಿಗೂ ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ ಮತ್ತೆ ಪೋಲಿಯೋ ಹನಿ ಹಾಕಿಸಬೇಕೆಂದು ಅವರು ಈ ಸಂದರ್ಭ ಮನವಿ ಮಾಡಿದರು.

ದ.ಕ. ಜಿಲ್ಲೆಯಲ್ಲಿ ಒಟ್ಟು 921 ಬೂತ್‌ಗಳಲ್ಲಿ ಪೋಲಿಯೋ ಲಸಿಕೆ ನೀಡಲಾಗುತ್ತಿದ್ದು, 1,54,023 ಮಕ್ಕಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.

ಮಾ. 7ರಿಂದ ಮಿಷನ್ ಇಂದ್ರಧನುಷ್ ಅಭಿಯಾನ

ಮಕ್ಕಳಲ್ಲಿ ಕಂಡು ಬರುವ ಬಾಲಕ್ಷಯ, ಪೋಲಿಯೋ, ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ಹಿಬ್, ಕಾಮಾಲೆ, ರೋಟಾ ವೈರಸ್, ನ್ಯೂಮೊಕಾಕಲ್, ದಡಾರ ಹಾಗೂ ರುಬೆಲ್ಲದಂತಹ 10 ಮಾರಕ ರೋಗಗಳಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ನೀಡಲಾಗುವ ಸಾರ್ವತ್ರಿಕ ಲಸಿಕೆಯ ಇಂದ್ರಧನುಷ್ ಕಾರ್ಯಕ್ರಮ ಮಾರ್ಚ್ 7ರಿಂದ ಮೂರು ಸುತ್ತಿನಲ್ಲಿ ನಡೆಯಲಿದೆ ಎಂದರು.

ಮಾ.7ರಿಂದ 13ರವರೆಗೆ ಪ್ರಥಮ ಹಾಗೂ ಎಪ್ರಿಲ್ 4ರಿಂದ 19ರವರೆಗೆ ಎರಡನೆ ಹಾಗೂ ಮೇ 9ರಿಂದ 15ರವರೆಗೆ ಮೂರು ಸುತ್ತುಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಖಾಸಗಿ ಆಸ್ಪತ್ರೆ/ ಕ್ಲಿನಿಕ್‌ಗಳಲ್ಲಿ ಲಸಿಕೆ ಪಡೆದುಕೊಂಡ 5-6 ವರ್ಷದ ಮಕ್ಕಳು, 1ನೆ ತರಗತಿಯ ಮಕ್ಕಳು, 5 ಮತ್ತು 10ನೆ ತರಗತಿಯ ಮಕ್ಕಳು ತಮ್ಮ ಲಸಿಕಾ ಕಾರ್ಡನ್ನು ಶಾಲಾ ಪ್ರಾಂಶುಪಾಲರು/ ಶಿಕ್ಷಕರಿಗೆ ನೀಡಿ ಲಸಿಕೆ ಪಡೆದಿರುವುದನ್ನು ದೃಢೀಕರಣಗೊಳಿಸಲು ಸೂಚಿಸಲಾಗಿದೆ.

ಕೋವಿಡ್ ಸಾಂಕ್ರಾಮಿಕವು ದ.ಕ. ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಬಾಧಿಸಿದ್ದರ ಪರಿಣಾಮ ಕಳೆದ ಎರಡು ವರ್ಷಗಳಲ್ಲಿ ಲಸಿಕೆ ಪಡೆಯುವುದರಿಂದ ಸಾಕಷ್ಟು ಮಕ್ಕಳು ವಂಚಿತರಾಗಿರುವ ಸಾಧ್ಯತೆ ಇರುವುದರಿಂದ ಈ ಬಾರಿ ಲಸಿಕಾ ಅಭಿಯಾನಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ. ರಾಜೇಶ್, ಆರೋಗ್ಯ ಇಲಾಖೆಯ ಜ್ಯೋತಿ, ಲಿಝ್ಝಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News