ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆ: ಗೋಡ್ಸೆ ಬೆಂಬಲಿಸಿ ವಿವಾದ ಸೃಷ್ಟಿಸಿದ್ದ ಬಿಜೆಪಿ ಅಭ್ಯರ್ಥಿ ಗೆಲುವು
ಚೆನ್ನೈ: ಏಕಾಂಗಿಯಾಗಿ ಸ್ಪರ್ಧಿಸಿದರೂ ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ಪ್ರದರ್ಶನ ನೀಡಿದೆ.
ಬಿಜೆಪಿಯ ಅಭ್ಯರ್ಥಿ, ಗೋಡ್ಸೆ ಹಿಂಬಾಲಕಿ ಉಮಾ ಆನಂದನ್ ಅವರು ಚೆನ್ನೈನ ಹೃದಯಭಾಗದಲ್ಲಿರುವ ಪಶ್ಚಿಮ ಮಾಂಬಲಮ್‌ನ ವಾರ್ಡ್ ಸಂಖ್ಯೆ 134 ರಿಂದ ಗೆದ್ದಿದ್ದಾರೆ.
ಉಮಾ ಆನಂದನ್ ಅವರು ಈ ಹಿಂದೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಗೋಡ್ಸೆಯನ್ನು ಬಹಿರಂಗವಾಗಿ ಬೆಂಬಲಿಸಿ ವಿವಾದಕ್ಕೆ ಸಿಲುಕಿದ್ದರು.
ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಎಣಿಕೆ ಫೆಬ್ರವರಿ 22 ರಂದು ನಡೆದಿದೆ. ಡಿಎಂಕೆ ಮೈತ್ರಿಕೂಟವು ಎಐಎಡಿಎಂಕೆಯ ಭದ್ರಕೋಟೆಗಳನ್ನು ವಶಪಡಿಸಿ ಮೂಲಕ ಬೃಹತ್ ವಿಜಯವನ್ನು ಗಳಿಸಿದೆ. ವಿಶೇಷವಾಗಿ, ಕೊಂಗು ಪ್ರಾಂತ್ಯದಲ್ಲಿ ಡಿಎಂಕೆ ಸರಾಸರಿ 67% ಮತಗಳನ್ನು ಗಳಿಸಿದೆ. ಈ ಪ್ರಾಂತ್ಯದಲ್ಲಿ ಎಐಎಡಿಎಂಕೆ ಸರಾಸರಿ 16% ಮತ ಗಳಿಸಿದೆ.
ಒಟ್ಟು 5,539 ಮತಗಳನ್ನು ಗಳಿಸಿರುವ ಉಮಾ ಆನಂದನ್ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು 2,036 ಮತಗಳಿಂದ ಸೋಲಿಸಿದ್ದಾರೆ. ಇದಲ್ಲದೆ, ಬಿಜೆಪಿ ಅನೇಕ ವಾರ್ಡ್‌ಗಳಲ್ಲಿ ಗಣನೀಯ ಸಂಖ್ಯೆಯ ಮತಗಳನ್ನು ಗಳಿಸಿದೆ, ಕೆಲವು ವಾರ್ಡುಗಳಲ್ಲಿ ಎರಡನೇ ಸ್ಥಾನವನ್ನೂ ಪಡೆದುಕೊಂಡಿದೆ ಎಂದು indiatoday ವರದಿ ಮಾಡಿದೆ.