ಯುವಕನಿಗೆ ಚಿತ್ರಹಿಂಸೆ ನೀಡಿ ಕೊಲೆಗೈದು, ದೇಹವನ್ನು ಪೆಟ್ರೋಲ್ ಸುರಿದು ದಹಿಸಿದ 'ಗೋರಕ್ಷಕರು': ವೀಡಿಯೊ ವೈರಲ್

Update: 2022-02-23 13:12 GMT
photo: Twitter

ಬಿಹಾರ: ಸ್ವಘೋಷಿತ ಗೋರಕ್ಷಕರು ಮುಸ್ಲಿಂ ಯುವಕನೊಬ್ಬನಿಗೆ ಚಿತ್ರಹಿಂಸೆ ನೀಡುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಸದ್ಯ ಲಭಿಸಿರುವ ವರದಿಯ ಪ್ರಕಾರ, ಯುವಕನನ್ನು ಚಿತ್ರಹಿಂಸೆ ನೀಡಿ ಕೊಂದ ದುಷ್ಕರ್ಮಿಗಳ ತಂಡ ದೇಹವನ್ನು ಪೆಟ್ರೋಲ್‌ ಸುರಿದು ದಹಿಸಿದ್ದು ನಾಲೆಯೊಂದರಲ್ಲಿ ಹೂತಿದ್ದಾರೆ ಎಂದು ndtv.com ವರದಿ ಮಾಡಿದೆ. ಇನ್ನೊಂದು ವರದಿ, ಮೃತದೇಹವು ಬೇಗ ಕೊಳೆಯಲು ಉಪ್ಪು ಕೂಡಾ ಹಾಕಿದ್ದರು ಎಂದಿದೆ.

 ಬಿಹಾರದ ಸಮಸ್ತಿಪುರ್‌ ಜಿಲ್ಲೆಯ ಆಡಳಿತರೂಢ ಪಕ್ಷ ಜೆಡಿಯು ಸದಸ್ಯನಾಗಿರುವ ಮಹಮ್ಮದ್‌ ಖಲೀಲ್‌ ಆಲಮ್ ಗೋರಕ್ಷಕರ ಕೈಯಲ್ಲಿ ಸಿಕ್ಕು ಮೃತಪಟ್ಟ ದುರ್ದೈವಿ. ವೈರಲ್‌ ಆಗಿರುವ ವಿಡಿಯೋದಲ್ಲಿ ತನ್ನ ಮೇಲೆ ದಾಳಿ ನಡೆಸುತ್ತಿರುವ ಹಲ್ಲೆಕೋರರಿಗೆ ತನ್ನನ್ನು ಬಿಟ್ಟುಬಿಡುವಂತೆ ಕೈ ಜೋಡಿಸಿ ಮನವಿ ಮಾಡುವುದನ್ನು ಕಾಣಬಹುದು. ಹಲ್ಲೆ ಮಾಡುತ್ತಿರುವವರ ಗುರುತು ವೀಡಿಯೋ ಫೂಟೇಜ್‌ನಲ್ಲಿ ಗೋಚರಿಸುವುದಿಲ್ಲ, ಗೋಹತ್ಯೆ ಮಾಡುವ ಸ್ಥಳಗಳನ್ನು ಬಹಿರಂಗಪಡಿಸಲು ಮತ್ತು ಗೋಮಾಂಸ ಮಾರಾಟದಲ್ಲಿ ತೊಡಗಿರುವ ಜನರನ್ನು ಹೆಸರಿಸಲು ಸಂತ್ರಸ್ತ ಆಲಂ ರನ್ನು ಒತ್ತಾಯಿಸುವುದನ್ನು ವಿಡಿಯೋದಲ್ಲಿ ಕೇಳುತ್ತದೆ.

ಜೀವನದಲ್ಲಿ ಎಷ್ಟು ದನದ ಮಾಂಸ ತಿಂದಿದ್ದೀಯ? ಮಕ್ಕಳಿಗೂ ತಿನ್ನಿಸಿದ್ದಿಯ? ಎಂದೆಲ್ಲ ಪ್ರಶ್ನಿಸಿದ ದಾಳಿಕೋರರು ನಿನ್ನ ಕುರಾನಿನಲ್ಲಿ ಹೀಗೆ ಮಾಡಲು ಹೇಳಿದೆಯಾ ಎಂದು ಪ್ರಶ್ನಿಸುವುದು ಸಹ ಮುದ್ರಿತವಾಗಿದೆ.

 ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಘಟನೆಯ ಸುದ್ದಿ ಕ್ಲಿಪ್ಪಿಂಗ್ ಅನ್ನು ಟ್ವೀಟ್ ಮಾಡಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಬಿಹಾರದ ಎನ್‌ಡಿಎ ಸರ್ಕಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕಣ್ಮರೆಯಾಗಿದೆ, ಸ್ವತಃ ಜೆಡಿಯು ನಾಯಕನಾಗಿದ್ದ ಮುಸ್ಲಿಂ ಯುವಕನನ್ನು ಹೊಡೆದು ಜೀವಂತ ಸುಟ್ಟು ಸಮಾಧಿ ಮಾಡಲಾಗಿದೆ, ಬಿಹಾರದಲ್ಲಿ ಇಂತಹ ಘಟನೆಗಳು ಏಕೆ ನಡೆಯುತ್ತಿವೆ, ಜನರು ಏಕೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಲುತ್ತಾರೆ?" ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News