ಚೀನಾ: ಮಹಿಳೆಯ ಕುತ್ತಿಗೆಗೆ ಸರಪಳಿ ಬಿಗಿದ ಪ್ರಕರಣ ತನಿಖೆಗೆ ಆದೇಶ, ಹಲವು ಅಧಿಕಾರಿಗಳ ಅಮಾನತು

Update: 2022-02-23 17:36 GMT

ಸಾಂದರ್ಭಿಕ ಚಿತ್ರ
 

ಬೀಜಿಂಗ್, ಫೆ.23: ಮಾನವ ಹಕ್ಕುಗಳ ವ್ಯಾಪಕ ದಮನದ ಆರೋಪ ಎದುರಿಸುತ್ತಿರುವ ಚೀನಾದಲ್ಲಿ ಮತ್ತೊಂದು ಅಮಾನವೀಯ ಪ್ರಕರಣ ವರದಿಯಾಗಿದೆ. ಜಿಯಾಂಗ್ಸು ಪ್ರಾಂತದಲ್ಲಿ 8 ಮಕ್ಕಳ ತಾಯಿಯನ್ನು ಕುತ್ತಿಗೆಗೆ ಸರಪಳಿ ಬಿಗಿದು ಗುಡಿಸಲೊಂದರಲ್ಲಿ ಕಟ್ಟಿಹಾಕಿರುವ ವರದಿ ಸ್ಥಳೀಯ ಮಾಧ್ಯಮದಲ್ಲಿ ಪ್ರಕಟವಾಗಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಚೀನಾ ಹೇಳಿದ್ದು, ಜಿಯಾಂಗ್ಸು ಪ್ರಾಂತದ ಹಲವು ಸ್ಥಳೀಯ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದಾಗಿ ಘೋಷಿಸಿದೆ.

   ಜನವರಿ ಅಂತ್ಯಭಾಗದಲ್ಲಿ ಈ ಭಯಾನಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಟ್ವಿಟರ್ಗೆ ಪರ್ಯಾಯ ವೇದಿಕೆ ವೀಬೊದಲ್ಲಿ ಇದು ಅತ್ಯಂತ ಟ್ರೆಂಡಿಂಗ್ ವೀಡಿಯೊ ಆಗಿದ್ದು ಮಿಲಿಯಕ್ಕೂ ಅಧಿಕ ಜನ ವೀಕ್ಷಿಸಿದ್ದರು. ಬೀಜಿಂಗ್ನಲ್ಲಿ ಫೆ.4ರಿಂದ ನಡೆದ ಚಳಿಗಾಲದ ಒಲಿಂಪಿಕ್ಸ್ ಸಂದರ್ಭ ಅಧಿಕಾರಿಗಳು ಈ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು ಎಂದು ಮಾಧ್ಯಮಗಳು ಆರೋಪಿಸಿದ್ದವು. ಇದೀಗ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ವಾಸ್ತವಾಂಶವನ್ನು ದೃಢಪಡಿಸಲು ಮತ್ತು ನಿಯಮ ಉಲ್ಲಂಘಿಸಿದವರನ್ನು ಶಿಕ್ಷಿಸುವ ಉದ್ದೇಶದಿಂದ ಸಮಿತಿಯನ್ನು ರಚಿಸುವುದಾಗಿ ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತದ ಆಡಳಿತ ಘೋಷಿಸಿದೆ. ಸಾರ್ವಜನಿಕರ ಆತಂತಕ್ಕೆ ಈ ಉಪಕ್ರಮ ಪರಿಹಾರ ರೂಪಿಸಬಹುದು ಅಖಿಲ ಚೀನಾ ಮಹಿಳಾ ಫೆಡರೇಷನ್ ಪ್ರಕಟಿಸುವ ಪತ್ರಿಕೆ ಹೇಳಿದೆ.

ಅಮಾನತುಗೊಂಡಿರುವವರಲ್ಲಿ ಫೆಂಗ್ ವಿಭಾಗದ ಕಮ್ಯುನಿಸ್ಟ್ ಪಾರ್ಟಿ ಮುಖ್ಯಸ್ಥರೂ ಸೇರಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ. ಮಹಿಳೆಯರ ಅಕ್ರಮ ಸಾಗಾಣಿಕೆ ಜಾಲಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ ಎಂದು ಶಂಕಿಸಲಾಗಿದ್ದು, ಮಹಿಳೆಯರು, ಮಕ್ಕಳು ಹಾಗೂ ಮಾನಸಿಕ ಅಸ್ವಸ್ಥರ ಹಕ್ಕುಗಳಿಗೆ ಧಕ್ಕೆ ತರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಸರಕಾರ ಬದ್ಧವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಈ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿ ಪೆಕಿಂಗ್ ವಿವಿಯ 100 ಹಳೆಯ ವಿದ್ಯಾರ್ಥಿಗಳು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ಗೆ ನೇರವಾಗಿ ಪತ್ರ ಬರೆದಿದ್ದರು. ಕಟ್ಟುನಿಟ್ಟಿನ ಕಮ್ಯುನಿಸ್ಟ್ ಆಡಳಿತ ಇರುವ ಚೀನಾದಲ್ಲಿ ಸರಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಅಪರೂಪದ ಪ್ರಕರಣ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News