ಮಲ್ಯ, ನೀರವ್, ಚೋಕ್ಸಿಯಿಂದ ಒಟ್ಟು 18 ಸಾವಿರ ಕೋಟಿ ರೂ. ಬ್ಯಾಂಕ್ ಗಳಿಗೆ ವಾಪಸ್

Update: 2022-02-23 18:59 GMT
photo: ANI/PTI

ಹೊಸದಿಲ್ಲಿ: ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಗೆ ಸಂಬಂಧಿಸಿದ ಸಾಲ ಸುಸ್ತಿ ಪ್ರಕರಣಗಳಲ್ಲಿ ಈಗಾಗಲೇ 18 ಸಾವಿರ ಕೋಟಿ ರೂ.ಗಳನ್ನು ಬ್ಯಾಂಕ್ಗಳಿಗೆ ಹಿಂತಿರುಗಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರಕಾರ ತಿಳಿಸಿದೆ.

ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ತುಷಾರ್ ಮೆಹ್ತಾ ಅವರು ಒಟ್ಟು 67 ಸಾವಿರ ಕೋಟಿ ರೂ. ಮೌಲ್ಯದ ಸಾಲ ಸುಸ್ತಿ ಪ್ರಕರಣಗಳ ತನಿಖೆಯನ್ನು ಕಪ್ಪುಹಣ ಬಿಳುಪು ತಡೆ (ಪಿಎಂಎಲ್ಎ) ಕಾಯ್ದೆಯಡಿ ನಡೆಸಲಾಗುತ್ತಿದೆಯೆಂದು ನ್ಯಾಯಾಲಯಕ್ಕೆ ತಿಳಿಸಿದರು.

ಕಪ್ಪು ಹಣ ಬಿಳುಪು ತಡೆ ಕಾಯ್ದೆಯಡಿ ಆಸ್ತಿಗಳ ಶೋಧ, ಜಪ್ತಿ ಹಾಗೂ ಮುಟ್ಟುಗೋಲು ಹಾಕಲು ಜಾರಿ ನಿರ್ದೇಶನಾಲಯಕ್ಕೆ ವಿಸ್ತೃತವಾದ ಅಧಿಕಾರ ಇರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ನಡೆಸುತ್ತಿದೆ.

ಬ್ರಿಟನ್ನಿಂದ ಭಾರತಕ್ಕೆ ಗಡಿಪಾರುಗೊಳ್ಳುವುದನ್ನು ತಪ್ಪಿಸಲು ಕಾನೂನುಹೋರಾಟ ನಡೆಸುತ್ತಿರುವ ವಿಜಯ್ ಮಲ್ಯ ಅವರು ಭಾರತದ 17 ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲವನ್ನು ಬಾಕಿಯಿರಿಸಿದ್ದಾರೆ. ವಜ್ರ ಉದ್ಯಮಿಗಳಾದ ನೀರವ್ ಮೋದಿ ಹಾಗೂ ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಅವರು ಪಂಜಾಬ್ ನ್ಯಾಶನಲ್ ಬ್ಯಾಂಕ್ಗೆ 14 ಸಾವಿರ ಕೋಟಿ ರೂ.ಹಣವನ್ನು ವಂಚಿಸಿದ್ದಾರೆಂದು ಪ್ರಾಸಿಕ್ಯೂಶನ್ ಆರೋಪಿಸಿದೆ.
   
ನೀರವ್ ಮೋದಿ ಕೂಡಾ ಬ್ರಿಟನಿಂದ ಭಾರತಕ್ಕೆ ಗಡಿಪಾರುಗೊಳಿಸುವುದರ ವಿರುದ್ಧ ಬ್ರಿಟಿಶ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇನ್ನೋರ್ವ ಸುಸ್ತಿದಾರ ಚೋಕ್ಸಿ ಅವನ್ನು ಕಳೆದ ವರ್ಷ ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News