ಸೇಡಿನ ರಾಜಕಾರಣ: ಬಿಜೆಪಿ ವಿರುದ್ಧ ಎಂವಿಎ ವಾಗ್ದಾಳಿ

Update: 2022-02-24 03:05 GMT

ಮುಂಬೈ: ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಖಂಡ ನವಾಬ್ ಮಲಿಕ್ ಅವರನ್ನು ಬುಧವಾರ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ ಕ್ರಮಕ್ಕೆ ಮಹಾರಾಷ್ಟ್ರ ವಿಕಾಸ ಅಗಾಡಿ (ಎಂವಿಎ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ದಾವೂದ್ ಇಬ್ರಾಹಿಂ ಮತ್ತು ಆತನ ಗ್ಯಾಂಗ್‌ನ ಇತರ ಹಲವು ಮಂದಿಯ ವಿರುದ್ಧ ದಾಖಲಿಸಿರುವ ಹಣ ದುರುಪಯೋಗ ಪ್ರಕರಣದ ಸಂಬಂಧ ಮಲಿಕ್ ಅವರನ್ನು ಬಂಧಿಸಲಾಗಿದೆ. ತಕ್ಷಣ ಮಲಿಕ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದ್ದರೆ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಆಡಳಿತಾರೂಢ ಮೈತ್ರಿಕೂಟ ಸ್ಪಷ್ಟಪಡಿಸಿದೆ.

"ಕೇಂದ್ರ ಸರ್ಕಾರ ತನ್ನ ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದಕ್ಕೆ ಇದು ಮತ್ತೊಂದು ನಿದರ್ಶನ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದ ಕಾರಣಕ್ಕೆ ಮಲಿಕ್ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ದಾವೂದ್ ಪ್ರಕರಣದ ಹಿನ್ನೆಲೆಯಲ್ಲಿ ನನ್ನ ವಿರುದ್ಧವೂ ಇಂಥ ಆರೋಪ ಬಂದಿತ್ತು" ಎಂದು ಎನ್‌ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.

"ಮಲಿಕ್ ಅವರ ವಿಚಾರಣೆ ನಡೆಸುವುದರಲ್ಲಿ ಹೊಸದೇನೂ ಇಲ್ಲ. ಅವರು ಬಹಿರಂಗವಾಗಿ ಕೇಂದ್ರವನ್ನು ಟೀಕಿಸುತ್ತಿದ್ದರು. ಅವರಿಗೆ ಕಿರುಕುಳ ನೀಡಲಾಗುತ್ತದೆ ಎನ್ನುವ ಖಾತರಿ ನಮಗಿತ್ತು. ಮುಸ್ಲಿಂ ರಾಜಕೀಯ ಮುಖಂಡರನ್ನು ದಾವೂದ್ ಜತೆ ನಂಟಿದೆ ಎಂದು ಸಂಬಂಧ ಕಲ್ಪಿಸುವುದು ಸುಲಭ. ನಾನು ಸಿಎಂ ಆಗಿದ್ದಾಗ ನನ್ನ ವಿರುದ್ಧವೂ ಇಂಥ ಆರೋಪ ಬಂದಿತ್ತು. ಕಳೆದ 25 ವರ್ಷಗಳಿಂದ ನನ್ನ ವಿರುದ್ಧ ಇಂಥ ಪರಿಸ್ಥಿತಿ ಸೃಷ್ಟಿಸಲಾಗಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು, ದಾವೂದ್ ಜತೆಗೆ ಸಂಪರ್ಕ ಕಲ್ಪಿಸುವುದು, ಕಿರುಕುಳ ನೀಡುವುದು, ಅವಮಾನಿಸುವುದು. ಈಗ ಕೂಡಾ ಇದೇ ನಡೆದಿದೆ" ಎಂದು ಆಪಾದಿಸಿದರು.

ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್, ತಕ್ಷಣ ಮಲಿಕ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಎನ್‌ಪಿಇ ಇದಕ್ಕೆ ನಿರಾಕರಿಸಿದೆ. ಶರದ್ ಪವಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನವಾಬ್ ಅವರ ಬೆಂಬಲಕ್ಕೆ ನಿಲ್ಲುವ ನಿರ್ಧಾರವನ್ನು ದೃಢಪಡಿಸಲಾಗಿದೆ. ಕಾಂಗ್ರೆಸ್ ಸಚಿವರಾದ ಬಾಳಾಸಾಹೇಬ್ ಥೋರಟ್ ಮತ್ತು ಅಶೋಕ್ ಚವ್ಹಾಣ್ ಕೂಡಾ ಇದರಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News