ಸರ್ಕಾರಿ ಸ್ವಾಮ್ಯದ ಇಂಧನ ಘಟಕಗಳನ್ನು ನಷ್ಟದಿಂದ ರಕ್ಷಿಸಲು ಪೆಟ್ರೋಲ್, ಡೀಸೆಲ್ ತೆರಿಗೆ ಮತ್ತಷ್ಟು ಕಡಿತ?

Update: 2022-02-25 03:10 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ರಶ್ಯಾ - ಉಕ್ರೇನ್ ಸಂಘರ್ಷದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಎಂಟು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದ ಬೆನ್ನಲ್ಲೇ, ಸರ್ಕಾರಿ ಸ್ವಾಮ್ಯದ ಇಂಧನ ಘಟಕಗಳನ್ನು ನಷ್ಟದಿಂದ ರಕ್ಷಿಸುವ ಸಲುವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಜತೆಗೆ ದೇಶದಲ್ಲಿ ತೈಲ ಮತ್ತು ಅನಿಲ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಆಕರ್ಷಕ ಉತ್ತೇಜಕ ಪ್ಯಾಕೇಜ್ ಸಿದ್ಧಪಡಿಸುತ್ತಿದೆ ಎಂದು hindustantimes.com ವರದಿ ಮಾಡಿದೆ.

ಕೈಗೆಟುಕುವ ದರದಲ್ಲಿ ತೈಲ ಜನತೆಗೆ ಲಭ್ಯವಾಗುವಂತೆ ಮಾಡಲು ಸರ್ಕಾರ ಬದ್ಧ. ಭೌಗೋಳಿಕ ಮತ್ತು ರಾಜಕೂಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಾಗೂ ಎಲ್ಲ ಆಯ್ಕೆಗಳನ್ನು ಪರಿಶೀಲಿಸಿ, ಕೇಂದ್ರೀಯ ಸೀಮಾ ಸುಂಕವನ್ನು ಇಳಿಸುವುದೂ ಸೇರಿದಂತೆ ವಿವಿಧ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಸ್ತುತ ಪ್ರತಿ ಲೀಟರ್ ಪೆಟ್ರೋಲ್/ಡೀಸೆಲ್ ಮಾರಾಟದ ಮೇಲೆ ತೈಲ ಕಂಪನಿಗಳಿಗೆ 8-10 ರೂಪಾಯಿ ನಷ್ಟವಾಗುತ್ತಿದ್ದರೂ, ನವೆಂಬರ್ 4ರ ಬಳಿಕ ಇಂಧನದ ಚಿಲ್ಲರೆ ಮಾರಾಟ ದರವನ್ನು ಹೆಚ್ಚಿಸಿಲ್ಲ. ಮಾರ್ಚ್ 7ರಂದು ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳು ಮುಗಿದ ಬಳಿಕ ಮತ್ತೆ ದರ ಹೆಚ್ಚಳದ ಭೀತಿ ಎದುರಾಗಲಿದೆ.

ಪ್ರಸ್ತುತ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕೇಂದ್ರೀಯ ಸೀಮಾ ಸುಂಕ ಕ್ರಮವಾಗಿ ಲೀಟರ್ ಗೆ 27.90 ರೂಪಾಯಿ ಹಾಗೂ 21.80 ರೂಪಾಯಿ ಇದೆ. ದೀಪಾವಳಿಯ ಸಂದರ್ಭದಲ್ಲಿ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು 5 ರೂಪಾಯಿ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು 10 ರೂಪಾಯಿ ಇಳಿಸಿತ್ತು.

ಉಕ್ರೇನ್ ಸಂಘರ್ಷದಿಂದಾಗಿ ಕಚ್ಚಾತೈಲದ ಬೆಲೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಈ ವರ್ಷದ ಆರಂಭದಿಂದಲೇ ತೈಲ ಬೆಲೆ ಏರಿಕೆಯ ಹಾದಿಯಲ್ಲಿದ್ದು, ಗುರುವಾರ 52 ವಾರಗಳ ಗರಿಷ್ಠ ಅಂದರೆ ಪ್ರತಿ ಬ್ಯಾರಲ್‍ಗೆ 105.79 ಡಾಲರ್‍ಗೆ ಏರಿದೆ. ಇದು ಬುಧವಾರ ಇದ್ದ ದರಕ್ಕೆ ಹೋಲಿಸಿದರೆ ಶೇಕಡ 9.2ರಷ್ಟು ಅಧಿಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News