ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಏರ್‌ ಇಂಡಿಯಾ ವಿಮಾನ ಸಜ್ಜು: ಅಧಿಕಾರಿಗಳಿಂದ ಮಾಹಿತಿ

Update: 2022-02-25 18:05 GMT

ಹೊಸದಿಲ್ಲಿ,ಫೆ.25: ಉಕ್ರೇನ್ ನಲ್ಲಿ ಸಿಕ್ಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಮರಳಿ ತರಲು ಎರಡು ವಿಶೇಷ ವಿಮಾನಗಳನ್ನು ನಿಯೋಜಿಸಲಾಗಿದ್ದು,ತೆರವು ಕಾರ್ಯಾಚರಣೆಯ ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸಲಿದೆ ಎಂದು ಸರಕಾರಿ ಮೂಲಗಳು ಶುಕ್ರವಾರ ಇಲ್ಲಿ ತಿಳಿಸಿದವು. ರಷ್ಯದ ಮಿಲಿಟರಿ ಕಾರ್ಯಾಚರಣೆಗಳ ನಡುವೆ ಸುಮಾರು 16,000 ಭಾರತೀಯರು ಈಗಲೂ ಉಕ್ರೇನ್ನಲ್ಲಿ ಬದುಕು ದೂಡುತ್ತಿದ್ದಾರೆ.

ಇನ್ನಷ್ಟು ತೆರವು ಕಾರ್ಯತಂತ್ರಗಳನ್ನು ರೂಪಿಸಲು ಭದ್ರತೆ ಕುರಿತು ಸಂಪುಟ ಸಮಿತಿಯು ಶನಿವಾರ ಸಭೆ ಸೇರಲಿದೆ. ವಿಶೇಷ ವಿಮಾನಗಳು ಗುರುವಾರ ರಾತ್ರಿ ರೊಮೇನಿಯಾಕ್ಕೆ ತೆರಳಿದ್ದು,ನಾಳೆ ಸ್ವದೇಶಕ್ಕೆ ಮರಳಲಿವೆ.

ಉಕ್ರೇನ್ ತನ್ನ ವಾಯು ಪ್ರದೇಶವನ್ನು ಮುಚ್ಚಿದ ಬಳಿಕ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಭಾರತವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ತೆರವು ಕಾರ್ಯಾಚರಣೆಗೆ ನೆರವಾಗಲು ಹಂಗರಿ,ಪೋಲಂಡ್,ಸ್ಲೊವಾಕ್ ರಿಪಬ್ಲಿಕ್ ಮತ್ತು ರೊಮೇನಿಯಾದಲ್ಲಿಯ ಉಕ್ರೇನ್ಗೆ ಹೊಂದಿಕೊಂಡಿರುವ ಗಡಿಪ್ರದೇಶಗಳಿಗೆ ತಂಡಗಳನ್ನು ರವಾನಿಸುವುದಾಗಿ ವಿದೇಶಾಂಗ ಕಚೇರಿಯು ಗುರುವಾರ ಸಂಜೆ ಪ್ರಕಟಿಸಿತ್ತು.

ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಅವರು,ಉಕ್ರೇನ್ನಿಂದ ವಿಮಾನಯಾನಗಳನ್ನು ಅನುಕೂಲಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾತನಾಡಿದ್ದರು. ಉಕ್ರೇನ್ನಿಂದ ನಿರ್ಗಮಿಸಬಹುದಾದ ಪ್ರಯಾಣಿಕರ ಸಂಖ್ಯೆಯ ಮೇಲಿನ ಮಿತಿಯನ್ನು ತೆಗೆಯುವುದು ಈ ಕ್ರಮಗಳಲ್ಲಿ ಸೇರಿದೆ. ವಿಮಾನ ಯಾನಗಳ ಸಂಖ್ಯೆಯನ್ನು ವಾರಕ್ಕೆ ಎರಡರಿಂದ ಶೀಘ್ರವೇ ದಿನಕ್ಕೆ ಎರಡು ಯಾನಗಳಿಗೆ ಹೆಚ್ಚಿಸುತ್ತೇವೆ. ಇದರಿಂದ ಕನಿಷ್ಠ 4,000 ಭಾರತೀಯ ಪ್ರಜೆಗಳನ್ನು ಮತ್ತು ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News