ರಾಜಧಾನಿ ಕೀವ್‌ನ ಹೊರಗೆ ರಷ್ಯದ ಸೇನೆಯೊಂದಿಗೆ ಹೋರಾಡುತ್ತಿರುವ ಉಕ್ರೇನ್ ಪಡೆಗಳು

Update: 2022-02-25 17:53 GMT
ಉಕ್ರೇನ್

ಕೀವ್,ಫೆ.25: ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಮೇಲಿನ ತನ್ನ ಆಕ್ರಮಣವನ್ನು ಶುಕ್ರವಾರ ತೀವ್ರಗೊಳಿಸಿದ್ದು,ಅವರ ಪಡೆಗಳು ರಾಜಧಾನಿ ಕೀವ್ ನಗರವನ್ನು ಸುತ್ತುವರಿದಿವೆ. ಕೀವ್ನಲ್ಲಿ ತಾವು ರಷ್ಯದ ಪಡೆಗಳ ವಿರುದ್ಧ ಹೋರಾಡುತ್ತಿರುವುದಾಗಿ ಉಕ್ರೇನ್ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯದ ಪಡೆಗಳು ಉಕ್ರೇನ್ ಸೇನೆಯ ಶಸ್ತ್ರಸಜ್ಜಿತ ವಾಹನವೊಂದನ್ನು ವಶಪಡಿಸಿಕೊಂಡಿವೆ ಮತ್ತು ರಷ್ಯದ ಯುದ್ಧಟ್ಯಾಂಕ್ಗಳೊಂದಿಗೆ ಕೀವ್ ನಗರವನ್ನು ಪ್ರವೇಶಿಸುತ್ತಿವೆ ಎಂದು ಉಕ್ರೇನ್ ನ ಉಪ ರಕ್ಷಣಾ ಸಚಿವೆ ಹ್ಯಾನಾ ಮಲ್ಯಾರ್ ತಿಳಿಸಿದರು.

ರಷ್ಯದ ಸೇನೆಯನ್ನು ಹಿಮ್ಮೆಟ್ಟಿಸಲು ಕೀವ್ ನಿಂದ ಸುಮಾರು 60 ಕಿ.ಮೀ.ದೂರದ ಇವಾನ್ಕಿವ್ ಪ್ರದೇಶದಲ್ಲಿ ನದಿಯೊಂದರ ಸೇತುವೆಯನ್ನು ನಾಶಗೊಳಿಸಲಾಗಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಖೆರ್ಸನ್ ನ ಆಡಳಿತಾತ್ಮಕ ಕಟ್ಟಡವೊಂದರ ಮೇಲೆ ರಷ್ಯದ ಧ್ವಜಗಳನ್ನು ಹಾರಿಸಲಾಗಿದೆ ಎಂದೂ ವರದಿಯು ತಿಳಿಸಿದೆ. ಖಾರ್ಖಿವ್ನಲ್ಲಿಯೂ ಉಭಯ ಪಡೆಗಳ ನಡುವೆ ವ್ಯಾಪಕ ಕಾಳಗ ನಡೆಯುತ್ತಿದೆ.

ಶುಕ್ರವಾರ ಬೆಳಿಗ್ಗೆ ಕೀವ್ ಸಮೀಪದ ಗೊಸ್ಟೊಮೆಲ್ ವಿಮಾನ ನಿಲ್ದಾಣದ ಮೇಲೆ ನಿಯಂತ್ರಣಕ್ಕಾಗಿ ಉಕ್ರೇನ್ ಮತ್ತು ರಷ್ಯ ಪಡೆಗಳು ಕಾದಾಡಿದ್ದವು. ಬಳಿಕ ರಷ್ಯದ ಪಡೆಗಳು ಮಿಲಿಟರಿ ಹೆಲಿಕಾಪ್ಟರ್ಗಳನ್ನು ಬಳಸಿ ಅದನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ.
 
ಹಲವಾರು ರಂಗಗಳಲ್ಲಿ ಉಕ್ರೇನ್ ಪಡೆಗಳ ಸಂಖ್ಯೆ ಕಡಿಮೆಯಿದ್ದರೂ ಎಲ್ಲ ಕಡೆಗಳಲ್ಲಿಯೂ ಅವು ರಷ್ಯದ ಸೇನೆಯೊಂದಿಗೆ ಕಾಳಗದಲ್ಲಿ ತೊಡಗಿವೆ ಎಂದು ಉಕ್ರೇನ್ ನ ಅಧಿಕಾರಿಯೋರ್ವರು ತಿಳಿಸಿದರು. ಉಕ್ರೇನ್ ನ ಹೆಚ್ಚಿನ ರಕ್ಷಣಾ ಸಾಮರ್ಥ್ಯವನ್ನು ತಾನು ನಾಶಗೊಳಿಸಿರುವುದಾಗಿ ರಷ್ಯ ಹೇಳಿದೆ.
 
ಉಕ್ರೇನ್ ಪಡೆಗಳು 450ಕ್ಕೂ ಹೆಚ್ಚಿನ ರಷ್ಯನ್ ಸೈನಿಕರನ್ನು ಕೊಂದಿವೆ ಎಂದು ಬ್ರಿಟನ್ ರಕ್ಷಣಾ ಕಾರ್ಯದರ್ಶಿಯನ್ನು ಉಲ್ಲೇಖಿಸಿ ಸ್ಕೈ ನ್ಯೂಸ್ ವರದಿ ಮಾಡಿದೆ. ಹೋರಾಟದ ಮೊದಲ ದಿನ 137 ‘ಹೀರೊ’ಗಳು ಕೊಲ್ಲ್ಲಲ್ಪಟ್ಟ್ದಿದ್ದಾರೆ ಎಂದು ಹೇಳಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ,ತನ್ನ ರಕ್ಷಣೆಯಲ್ಲಿ ಉಕ್ರೇನ್ ಅನ್ನು ಒಂಟಿಯಾಗಿಸಿದ್ದಕ್ಕಾಗಿ ಅಮೆರಿಕ ಮತ್ತು ನ್ಯಾಟೊ ಕೂಟವನ್ನು ಖಂಡಿಸಿದ್ದಾರೆ.

ಬೆಲಾರುಸ್ ಮತ್ತು ಉಕ್ರೇನ್ನ ಪೂರ್ವದಿಂದ ರಷ್ಯದ ಟ್ಯಾಂಕುಗಳ ನುಗ್ಗುವಿಕೆ ಹಾಗೂ ವಾಯುದಾಳಿಗಳು ಮತ್ತು ಕ್ಷಿಪಣಿ ದಾಳಿಗಳು ಕೀವ್ ನಗರವನ್ನು ತಲ್ಲಣಗೊಳಿಸಿವೆ. ನಗರದಲ್ಲಿಯ ನಾಗರಿಕ ಕಟ್ಟಡವೊಂದರ ಮೆಲೆ ರಷ್ಯದ ವಾಯುದಾಳಿಯಿಂದ ನಾಲ್ವರು ಗಾಯಗೊಂಡಿದ್ದಾರೆ ಎಂದು ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್ಚ್ಕೊ ಅವರು ಈ ಮೊದಲು ತಿಳಿಸಿದ್ದರು.

ಬ್ಯಾಲಿಸ್ಟಿಕ್ ಅಥವಾ ಕ್ರೂಸ್ ಕ್ಷಿಪಣಿಗಳಿಂದ ದಾಳಿಗಳು ನಡೆದಿರಬಹುದು ಎಂದು ಉಕ್ರೇನ್ನ ಆಂತರಿಕ ಸಚಿವರ ಸಹಾಯಕ ಗೆರಾಷ್ಚೆಂಕೋ ತಿಳಿಸಿದರು. ಆಕ್ರಮಣದ ಎರಡನೇ ದಿನವಾದ ಶುಕ್ರವಾರ ನಸುಕಿನ ನಾಲ್ಕು ಗಂಟೆಗೆ ರಷ್ಯದ ದಾಳಿಗಳು ಪುನರಾರಂಭಗೊಂಡಿದ್ದವು ಎಂದು ಬ್ರಿಟನ್ ಮೂಲದ ಸುದ್ದಿಸಂಸ್ಥೆ ಸ್ಕೈ ನ್ಯೂಸ್ ಹೇಳಿದೆ.

ಸರಕಾರ ಪದಚ್ಯುತಗೊಳಿಸಲು ಉಕ್ರೇನ್ ಸೇನೆಗೆ ಪುಟಿನ್ ಕರೆ
 
ಉಕ್ರೇನ್ ಸರಕಾರವು ಭಯೋತ್ಪಾದಕರು ಹಾಗೂ ಮಾದಕದ್ರವ್ಯ ವ್ಯಸನಿಗಳು ಹಾಗೂ ನವನಾಝಿಗಳ ಗ್ಯಾಂಗ್ ಆಗಿದ್ದು, ಅದನ್ನು ಕಿತ್ತೊಗೆಯಬೇಕೆಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಉಕ್ರೇನ್ ಸೇನೆಗೆ ಕರೆ ನೀಡಿದ್ದಾರೆ.

ರಶ್ಯನ್ ಸೈನಿಕರನ್ನು ಕೆರಳಿಸಲು ಉಕ್ರೇನ್ನ ರಾಷ್ಟ್ರೀಯವಾದಿಗಳು ನಗರ ಪ್ರಮುಖ ವಸತಿ ಪ್ರದೇಶಗಳಲ್ಲಿ ಅಪಾರ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡುತ್ತಿದ್ದಾರೆಂದು ಪುಟಿನ್ ಆರೋಪಿಸುತ್ತಿದ್ದಾರೆ.
 
ತನ್ನ ಟಿವಿ ಭಾಷಣದಲ್ಲಿ ಉಕ್ರೇನ್ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಉಕ್ರೇನ್ನ ಅಧಿಕಾರವನ್ನು ನಿಮ್ಮ ಕೈಗೆ ತೆಗೆದುಕೊಳ್ಳಿ ಎಂದು ಕರೆ ನೀಡಿದ್ದಾರೆಂದು ರಶ್ಯನ್ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ರಶ್ಯದ 2800 ಯೋಧರ ಹತ್ಯೆ: ಉಕ್ರೇನ್ ಉಪರಕ್ಷಣಾ ಸಚಿವೆ
ಉಕ್ರೇನ್ ಮೇಲಿನ ದಾಳಿಯಲ್ಲಿ ರಶ್ಯ 2800 ಯೋಧರು ಹತರಾಗಿದ್ದಾರೆ ಹಾಗೂ 80ಕ್ಕೂ ಅಧಿಕ ಸಮರಟ್ಯಾಂಕ್ಗಳು ನಾಶವಾಗಿವೆ ಎಂದು ಉಕ್ರೇನ್ ನ ಉಪರಕ್ಷಣಾ ಸಚಿವ ಹನ್ನಾ ಮಲ್ಯಾರ್ ಶುಕ್ರವಾರ ತಿಳಿಸಿದ್ದಾರೆ. ರಶ್ಯದ 516 ಕವಚಾವೃತ ಸಮರ ವಾಹನಗಳು, 10 ವಿಮಾನಗಳು ಹಾಗೂ 7 ಹೆಲಿಕಾಪ್ಟರ್ಗಳು ಕೂಡಾ ನಾಶವಾಗಿವೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News