×
Ad

ಉಕ್ರೇನ್: ಬಂಕರ್, ಮೆಟ್ರೋ ಸ್ಟೇಷನ್ ಗಳಲ್ಲಿ 15 ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು

Update: 2022-02-27 00:08 IST

ಕೊಚ್ಚಿ, ಫೆ. 26: ರಷ್ಯಾದ ಸೇನೆ ಉಕ್ರೇನ್ ನ ರಾಜಧಾನಿ ಕೀವ್ಗೆ ಹತ್ತಿರವಾಗುತ್ತಿರುವ ಹಾಗೂ ಖಾರ್ಕಿವ್, ಡಿನ್ಪ್ರೊ, ಒಡೆಸ್ಸಾ ಹಾಗೂ ಸುಮಿ ಸೇರಿದಂತೆ ವಿವಿಧ ಸ್ಥಳಗಳ ಮೇಲಿನ ದಾಳಿಯನ್ನು ಮುಂದುವರಿಸುತ್ತಿರುವ ನಡುವೆ 15 ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಬಂಕರ್ ಹಾಗೂ ಮೆಟ್ರೋ ಸ್ಟೇಷನ್ನಲ್ಲಿ ಸಿಲುಕಿಕೊಂಡಿದ್ದು, ಸ್ವದೇಶಕ್ಕೆ ಸುರಕ್ಷಿತ ಹಿಂದಿರುಗಲು ಕಾಯುತ್ತಿದ್ದಾರೆ. 

‘‘ನಿನ್ನೆ ಬೆಳಗ್ಗೆ 5 ಗಂಟೆಗೆ ಸಂಭವಿಸಿದ ಸ್ಫೋಟದ ಶಬ್ದದಿಂದ ನನಗೆ ಎಚ್ಚರವಾಯಿತು. ಅದು ವಿಮಾನ ಎಂದು ನಾನು ಭಾವಿಸಿದ್ದೆ. ಆದರೆ, ಅದು ಕ್ಷಿಪಣಿಯಾಗಿತ್ತು’’ ಎಂದು ಲಕ್ಷ್ಮೀ ದೇವಿ ಅವರು ಹೇಳಿದ್ದಾರೆ. ಈಶಾನ್ಯ ಉಕ್ರೇನ್ನ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾನಿಲಯದ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿರುವ ಲಕ್ಷ್ಮೀ ದೇವಿ ಅವರು ಕೇರಳದ ಕಣ್ಣೂರಿನವರು. ದಾಳಿಯ ಬಳಿಕ ತಮ್ಮ ವಸತಿ ಸಂಕೀರ್ಣ ಅಥವಾ ಹಾಸ್ಟೆಲ್ಗಳಿಂದ ಹೊರಬರುವಂತೆ ಹಾಗೂ ಬಂಕರ್, ನೆಲಮಾಳಿಗೆ ಅಥವಾ ಮೆಟ್ರೋ ಸ್ಟೇಷನ್ಗಳಲ್ಲಿ ಆಶ್ರಯ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು. 

ಉಷ್ಣಾಂಶ ಸುಮಾರು 2 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾದ ಹೊರತಾಗಿಯೂ ತುಂಬಿದ ಸಬ್ವೇಯ ನಿಲ್ದಾಣದಲ್ಲಿ ಇವರು ರಾತ್ರಿಗಳನ್ನು ಧೈರ್ಯದಿಂದ ಕಳೆದಿದ್ದಾರೆ. ದೇವಿ, ಕೇರಳದ ಇತರ ಕೆಲವು ವಿದ್ಯಾರ್ಥಿಗಳು ಹಾಗೂ ಕೆಲವು ಉಕ್ರೇನ್ ಪ್ರಜೆಗಳು ಸೇರಿದಂತೆ 9 ಮಂದಿಯ ಗುಂಪು ಬಹಳ ಸೀಮಿತ ಆಹಾರ, ನೀರು ಹಾಗೂ ಇತರ ಸೌಲಭ್ಯಗಳೊಂದಿಗೆ ಬಂಕರ್ಗೆ ತೆರಳಿತು. ಕಡಿಮೆ ಬೆಳಕಿರುವ ಬಂಕರ್ನಲ್ಲಿ ಜಾಗ ಹಂಚಿಕೊಳ್ಳುವ ಸಂದರ್ಭ ಅಗತ್ಯದ ವಸ್ತುಗಳನ್ನು ಜೊತೆಯಲ್ಲಿ ಇರಿಸಿಕೊಂಡಿದ್ದೆವು ಎಂದು ಹೇಳಿದ ದೇವಿ, ಗುಂಪು ಭೀತಿಗೊಂಡಿತ್ತು. 

ಆದರೆ, ಅದು ತಮ್ಮ ವಸತಿ ಸಂಕೀರ್ಣಕ್ಕೆ ಭೇಟಿ ನೀಡಲು ಅಥವಾ ಹೊರಗೆ ಅಪಾಯ ಇರುವ ಹೊರತಾಗಿಯೂ ದಿನಸಿ ಖರೀದಿಸಲು ಕೆಲವೊಮ್ಮೆ ದಟ್ಟಣೆಯ ಪ್ರದೇಶದಿಂದ ಹೊರಬರಲು ಪ್ರಯತ್ನಿಸಿತು ಎಂದಿದ್ದಾರೆ. ನಾನು 30 ನಿಮಿಷಗಳ ಹಿಂದೆ ಕೊನೆಯ ಸ್ಫೋಟದ ಶಬ್ದ ಕೇಳಿದೆ. ಪ್ರತಿಯೊಬ್ಬರು ಭೀತಿಗೆ ಒಳಗಾಗಿದ್ದರು. ನಾವು ಯಾವಾಗಲೂ ಯುದ್ಧದ ಬಗ್ಗೆ ಕೇಳುತ್ತಿರುತ್ತೇವೆ. ಆದರೆ, ನಮಗೇ ಈ ಅಪಾಯ ಎದುರಾಗುತ್ತದೆ ಎಂದು ಯಾವತ್ತೂ ನಿರೀಕ್ಷಿಸಿರಲಿಲ್ಲ ಎಂದು ಲಕ್ಷ್ಮೀ ದೇವಿ ಹೇಳಿದ್ದಾರೆ. 

ಉಕ್ರೇನ್ ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ತೆರವಿಗೆ ರಾಹುಲ್ ಗಾಂಧಿ ಆಗ್ರಹ 

ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಗಮನ ಸೆಳೆದಿದ್ದಾರೆ. ಅಲ್ಲದೆ, ಅವರನ್ನು ತುರ್ತಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ‘‘ಭಾರತದ ವಿದ್ಯಾರ್ಥಿಗಳು ಬಂಕರ್ಗಳಲ್ಲಿ ಆಶ್ರಯ ಪಡೆದುಕೊಂಡಿರುವ ದೃಶ್ಯ ಮನ ಕಲಕುವಂತಿದೆ. ಭಾರೀ ದಾಳಿಗೊಳಗಾದ ಪೂರ್ವ ಉಕ್ರೇನ್ನಲ್ಲಿ ಹಲವರು ಸಿಲುಕಿಕೊಂಡಿದ್ದಾರೆ. ಶೋಕತಪ್ತ ಕುಟುಂಬಗಳ ಜೊತೆಗೆ ನಾನಿದ್ದೇನೆ. ಸಿಲುಕಿಕೊಂಡವರನ್ನು ಅಲ್ಲಿಂದ ತುರ್ತಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನಾನು ಮತ್ತೊಮ್ಮೆ ಕೇಂದ್ರ ಸರಕಾರವನ್ನು ಆಗ್ರಹಿಸುತ್ತೇನೆ’’ ಎಂದು ರಾಹುಲ್ ಗಾಂಧಿ ಟ್ವೀಟರ್ನಲ್ಲಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News