ಆರ್ಥಿಕ ತಿಳುವಳಿಕೆ ಇಲ್ಲದ ಆದಿತ್ಯನಾಥ್ ಯುಪಿ ಸಾಲವನ್ನು 40% ಹೆಚ್ಚಿಸಿದ್ದಾರೆ: ಪಿ ಚಿದಂಬರಂ
ಲಕ್ನೋ.ಫೆ.27: ನೀವು ಏತಕ್ಕಾಗಿ ಮತದಾನ ಮಾಡುತ್ತೀರಿ ಎನ್ನುವ ಬಗ್ಗೆ ಯೋಚಿಸುವಂತೆ ಇಲ್ಲಿ ರವಿವಾರ ಜನತೆಯನ್ನು ಕೇಳಿಕೊಂಡ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು, ಯೋಗಿ ಆದಿತ್ಯನಾಥ್ ಸರಕಾರವು ಉತ್ತರ ಪ್ರದೇಶವನ್ನು ಇನ್ನಷ್ಟು ಬಡವಾಗಿಸಿದೆ ಮತ್ತು ರಾಜ್ಯದ ಸಾಲವನ್ನು ಶೇ.40ರಷ್ಟು ಹೆಚ್ಚಿಸಿದೆ ಎಂದು ಟೀಕಿಸಿದರು.
ತನ್ನ ಪಕ್ಷವನ್ನು ಸಮರ್ಥಿಸಿಕೊಂಡ ಅವರು,ಕಾಂಗ್ರೆಸ್ ನ ‘ಲಡ್ಕಿ ಹೂಂ ಲಡ್ ಸಕ್ತಿ ಹೂಂ’ ಘೋಷಣೆಯು ಚುನಾವಣೆಗಳಲ್ಲಿ ಲಿಂಗ ಸಮಾನತೆಯ ಗುರಿಗೆ ಹೊಸ ಆಯಾಮವನ್ನು ನೀಡಿದೆ ಎಂದರು.
ತಾವು ಯಾತಕ್ಕಾಗಿ ಮತ ನೀಡುತ್ತಿದ್ದೇವೆ ಎನ್ನುವುದನ್ನು ಜನರಿಂದ ತಿಳಿದುಕೊಳ್ಳಲು ಬಯಸಿದ ಅವರು,ಆದಿತ್ಯನಾಥ ಆಡಳಿತದ ಮಾದರಿಯು ನಿರಂಕುಶವಾದ,ಧಾರ್ಮಿಕ ದ್ವೇಷವನ್ನು ಹೆಚ್ಚಿಸುವುದು,ಜಾತಿ ವೈರತ್ವವನ್ನು ಬೆಳೆಸುವುದು,ಪೊಲೀಸ್ ದೌರ್ಜನ್ಯಗಳು ಮತ್ತು ಲಿಂಗಾಧಾರಿತ ಹಿಂಸೆಯ ಮಿಶ್ರಣವಾಗಿದೆ. ಈ ಮಾದರಿಯು ರಾಜ್ಯವನ್ನು ಇನ್ನಷ್ಟು ಬಡವಾಗಿಸಿದೆ ಮತ್ತು ಹೆಚ್ಚಿನ ಜನರನ್ನು ಬಡವರನ್ನಾಗಿಯೇ ಉಳಿಸಿದೆ. ರಾಜ್ಯದ ಒಟ್ಟು ಬಾಕಿ ಸಾಲವು 6.62 ಲ.ಕೋ.ರೂ.ಗಳನ್ನು ದಾಟಿದೆ ಎಂದರು.
ಉ.ಪ್ರದೇಶದ ಜನರು ಅತ್ಯಂತ ಶ್ರಮಜೀವಿಗಳು ಎಂದು ಪ್ರಶಂಸಿಸಿದ ಚಿದಂಬರಂ,ನೀವು ಎಂಟು ಪ್ರಧಾನ ಮಂತ್ರಿಗಳನ್ನು ದಿಲ್ಲಿಗೆ ಕಳುಹಿಸಿದ್ದೀರಿ ಮತ್ತು ಅವರೆಲ್ಲರೂ ಗೌರವಾನ್ವಿತ ವ್ಯಕ್ತಿಗಳಾಗಿದ್ದರು. ನರೇಂದ್ರ ಮೋದಿಯವರನ್ನು ಈ ಪಟ್ಟಿಗೆ ಸೇರಿಸಿದರೆ ಅವರು ಒಂಭತ್ತನೆಯವರಾಗುತ್ತಾರೆ. ಆದರೂ ಉ.ಪ್ರದೇಶವು ಬಡತನದಲ್ಲಿಯೇ ತೊಳಲಾಡುತ್ತಿದೆ ಮತ್ತು ಅದರ ಜನರು ಬಡವರಾಗಿಯೇ ಉಳಿದಿದ್ದಾರೆ. ಹಲವಾರು ಆರ್ಥಿಕ ಮತ್ತು ಸಾಮಾಜಿಕ ಸೂಚಕಗಳಲ್ಲಿ ರಾಜ್ಯವು ತಳಮಟ್ಟದಲ್ಲಿದೆ ಎಂದರು.
ಇದು ಕಠಿಣ ಹೋರಾಟದ ಚುನಾವಣೆಯಾಗಿದೆ. ಇಲ್ಲಿ ನಾಲ್ವರು ಪ್ರಮುಖ ಆಟಗಾರರಿದ್ದಾರೆ ಮತ್ತು ಅವರಲ್ಲಿ ಪ್ರತಿಯೊಬ್ಬರೂ ತನ್ನದೇ ಆದ ಬಲ ಮತ್ತು ಆಕರ್ಷಣೆ ಹೊಂದಿದ್ದಾರೆ ಎಂದ ಅವರು,ಸುದೀರ್ಘ ವಿರಾಮದ ಬಳಿಕ ಕಾಂಗ್ರೆಸ್ ರಾಜ್ಯದ ಎಲ್ಲ 403 ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದು ಚುನಾವಣೆಗಳಲ್ಲಿ ಲಿಂಗ ಸಮಾನತೆಗೆ ಹೊಸ ಆಯಾಮವನ್ನು ನೀಡಿದೆ. ಅದರ ಮೈ ಲಡ್ಕಿ ಹೂಂ,ಮೈ ಲಡ್ ಸಕ್ತಿ ಹೂಂ ಘೋಷಣೆಯು ಪ್ರಚಾರ ಅಭಿಯಾನಕ್ಕೆ ಹೊಸ ಶಕ್ತಿಯನ್ನು ತಂದಿದೆ ಎಂದರು.
ಆದತ್ಯನಾಥ ಸರಕಾರದ ಕಳಪೆ ಸಾಧನೆಗಾಗಿ ಅದರ ವಿರುದ್ಧ ದಾಳಿ ನಡೆಸಿದ ಚಿದಂಬರಂ,2016-17ರಲ್ಲಿ ಶೇ.11.4ರಷ್ಟಿದ್ದ ರಾಜ್ಯದ ಜಿಡಿಪಿಯು ಕ್ರಮೇಣ 2020-21ರಲ್ಲಿ ಶೇ.6.4ಕ್ಕೆ ಕುಸಿದಿದೆ. ಜನರ ತಲಾದಾಯವು ರಾಷ್ಟ್ರೀಯ ಸರಾಸರಿಯ ಅರ್ಧಕ್ಕಿಂತಲೂ ಕಡಿಮೆಯಿದೆ. ಆದಿತ್ಯನಾಥ ಆಡಳಿತದಡಿ ತಲಾದಾಯವು ವಾಸ್ತವದಲ್ಲಿ ಶೇ.1.9ರಷ್ಟು ಕುಸಿದಿದೆ. ರಾಜ್ಯದ ಒಟ್ಟು ಸಾಲವು 6,62,891 ಲ.ಕೋ.ರೂ. ಗಳಾಗಿದ್ದು,ಇದು ರಾಜ್ಯದ ಜಿಡಿಪಿಯ ಶೇ.34.2ರಷ್ಟಿದೆ ಮತ್ತು ಆದಿತ್ಯನಾಥ ಅವರೊಬ್ಬರೇ ರಾಜ್ಯದ ಸಾಲವನ್ನು ಶೇ.40ರಷ್ಟು ಹೆಚ್ಚಿಸಿದ್ದಾರೆ ಎಂದರು.