×
Ad

3,500ಕ್ಕೂ ಹೆಚ್ಚು ರಷ್ಯನ್ ಸೈನಿಕರು ಮೃತ್ಯು : ಉಕ್ರೇನ್

Update: 2022-02-28 07:55 IST

ಕೀವ್: ರಷ್ಯಾ ದಾಳಿಗೆ ಪ್ರತೀಕಾರವಾಗಿ ಉಕ್ರೇನ್ ನಡೆಸಿದ ಪ್ರತಿದಾಳಿಯಲ್ಲಿ 3,500ಕ್ಕೂ ಹೆಚ್ಚು ರಷ್ಯನ್ ಸೈನಿಕರು ಹತರಾಗಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ. ಜತೆಗೆ 200ಕ್ಕೂ ಹೆಚ್ಚು ಮಂದಿಯನ್ನು ಯುದ್ಧ ಕೈದಿಗಳಾಗಿ ಸೆರೆ ಹಿಡಿಯಲಾಗಿದೆ ಎಂದು ಪ್ರಕಟಿಸಿದೆ. ಆದರೆ ಉಕ್ರೇನ್ ಹೇಳಿಕೆಯನ್ನು ಕ್ರೆಮ್ಲಿನ್ ವಿಶ್ವಸಂಸ್ಥೆಯಲ್ಲಿ ಅಲ್ಲಗಳೆದಿದೆ.

ಯುದ್ಧದ ನಡುವೆ ಮಹತ್ವದ ನಿರ್ಧಾರ ಕೈಗೊಂಡಿರುವ ಉಭಯ ದೇಶಗಳು ಬೆಲರಸ್‌ನಲ್ಲಿ ಗಡಿ ವಿವಾದದ ಬಗ್ಗೆ ಯಾವುದೇ ಪೂರ್ವಷರತ್ತು ಇಲ್ಲದೇ ಮಾತುಕತೆ ನಡೆಸಲು ಒಪ್ಪಿಕೊಂಡಿವೆ ಎಂದು ಅಧ್ಯಕ್ಷ ವೊಲೊದಿಮಿರ್ ಝೆಲೆಸ್ಕಿ ಹೇಳಿದ್ದಾರೆ. ರಷ್ಯಾದ ದಾಳಿಯಲ್ಲಿ 14 ಮಕ್ಕಳು ಸೇರಿದಂತೆ 352 ಮಂದಿ ನಾಗರಿಕರು ಮೃತಪಟ್ಟಿದ್ದು, 116 ಮಕ್ಕಳು ಸೇರಿ 1684 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ತಮ್ಮ ಅಣ್ವಸ್ತ್ರ ನಿರೋಧ ಪಡೆಯನ್ನು ಕಟ್ಟೆಚ್ಚರದ ಸ್ಥಿತಿಯಲ್ಲಿ ಇಡುವಂತೆ ರಕ್ಷಣಾ ಪಡೆಗಳಿಗೆ ಸೂಚನೆ ನೀಡಿದ್ದಾರೆ. "ರಷ್ಯನ್ ಸೇನೆಯ ಅಣ್ವಸ್ತ್ರ ತಡೆ ಪಡೆಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ಮತ್ತು ಕಟ್ಟೆಚ್ಚರದ ಸ್ಥಿತಿಯಲ್ಲಿ ಇರಿಸುವಂತೆ ರಕ್ಷಣಾ ಸಚಿವರು ಮತ್ತು ರಷ್ಯನ್ ಸಶಸ್ತ್ರ ಪಡೆಗಳ ಸಾಮಾನ್ಯ ಸಿಬ್ಬಂದಿ ಮುಖ್ಯಸ್ಥರಿಗೆ ಆದೇಶಿಸುತ್ತಿದ್ದೇನೆ" ಎಂದು ಪುಟಿನ್ ಹೇಳಿಕೆ ನೀಡಿದ್ದಾರೆ. "ಪಾಶ್ಚಿಮಾತ್ಯ ದೇಶಗಳು ಆರ್ಥಿಕ ವಲಯದಲ್ಲಿ ನಮ್ಮ ದೇಶಕ್ಕೆ ಸ್ನೇಹಪರ ರಾಷ್ಟ್ರಗಳಲ್ಲ" ಎಂಬ ಪುಟಿನ್ ಹೇಳಿಕೆಯನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.

ಏತನ್ಮಧ್ಯೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಜತೆ ಮಾತುಕತೆ ನಡೆಸಿದ ಝೆಲೆನ್‌ಸ್ಕಿ, ಮುಂದಿನ 24 ಗಂಟೆಗಳು ಉಕ್ರೇನ್ ಪಾಲಿಗೆ ನಿರ್ಣಾಯಕ ಎಂದು ಹೇಳಿದ್ದಾರೆ. ಉಕ್ರೇನ್‌ಗೆ ರಕ್ಷಣಾ ಸಾಮಗ್ರಿಯ ನೆರವು ತಲುಪುವಂತೆ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಾನ್ಸನ್ ಭರವಸೆ ನೀಡಿದ್ದಾರೆ.

ನಮ್ಮ ಕಾಮ್ರೇಡ್‌ಗಳಲ್ಲಿ ಮೃತರು ಮತ್ತು ಗಾಯಾಳುಗಳಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೋರ್ ಕೊನಶೆನ್ಕೊವ್ ಒಪ್ಪಿಕೊಂಡಿದ್ದಾರೆ. ಆದರೆ ನಿಖರ ಸಂಖ್ಯೆ ಎಷ್ಟು ಎನ್ನುವುದನ್ನು ಬಹಿರಂಗಪಡಿಸಿಲ್ಲ. ಉಕ್ರೇನ್ ಪಡೆಗಳ ನಷ್ಟಕ್ಕೆ ಹೋಲಿಸಿದರೆ, ರಷ್ಯನ್ ಸೇನೆಗೆ ಆಗಿರುವ ಹಾನಿ ಹಲವು ಪಟ್ಟು ಕಡಿಮೆ ಎಂದು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News