ಉಕ್ರೇನ್‌ನಲ್ಲಿ ತಯಾರಿಸಲ್ಪಟ್ಟಿದ್ದ ವಿಶ್ವದ ಅತಿದೊಡ್ಡ ವಿಮಾನ ನಾಶಪಡಿಸಿದ ರಶ್ಯನ್‌ ಪಡೆಗಳು

Update: 2022-02-28 18:59 GMT
Photo: @DmytroKuleba

ಕೀವ್, ಫೆ.28: ವಿಶ್ವದ ಅತೀ ದೊಡ್ಡ ಸರಕು ವಿಮಾನ ಎಂಬ ಹೆಗ್ಗಳಿಕೆ ಹೊಂದಿದ್ದ ಉಕ್ರೇನ್ ನ ಆ್ಯಂಟೊನೊವ್ ಎನ್-225 ವಿಮಾನ ರಶ್ಯಾದ ದಾಳಿಗೆ ಸಿಲುಕಿ ನಾಶವಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.


ಮ್ರಿಯಾ ಎಂಬ ಹೆಸರಿನ ವಿಶ್ವದ ಅತ್ಯಂತ ದೊಡ್ಡ ವಿಮಾನವನ್ನು ಕೀವ್ ನಗರದ ಬಳಿಯ ವಾಯುನೆಲೆಯಲ್ಲಿ ಪಾರ್ಕ್ ಮಾಡಲಾಗಿತ್ತು. ಇದನ್ನು ರಶ್ಯಾದ ಆಕ್ರಮಣಕಾರರು ನಾಶಗೊಳಿಸಿದ್ದಾರೆ. ಆದರೆ ನಾವು ಮತ್ತೆ ಈ ವಿಮಾನವನ್ನು ನಿರ್ಮಿಸಲಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮ್ರಿಯಾ ಎಂದರೆ ಉಕ್ರೇನ್ ಭಾಷೆಯಲ್ಲಿ ಕನಸು ಎಂಬ ಅರ್ಥವಿದೆ.


 ರಶ್ಯಾವು ನಮ್ಮ ಮ್ರಿಯಾವನ್ನು ನಾಶಗೊಳಿಸಿರಬಹುದು. ಆದರೆ ಬಲಿಷ್ಟ, ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಯುರೋಪಿಯನ್ ದೇಶವಾಗುವ ನಮ್ಮ ಕನಸನ್ನು ನಾಶಗೊಳಿಸಲು ಅವರಿಂದ ಸಾಧ್ಯವಾಗದು. ನಾವು ಮೇಲುಗೈ ಸಾಧಿಸಲಿದ್ದೇವೆ ಎಂದು ಉಕ್ರೇನ್ನ ವಿದೇಶ ಸಚಿವ ಡಿಮಿಟ್ರೊ ಕುಲೆಬಾ ಟ್ವೀಟ್ ಮಾಡಿದ್ದಾರೆ. ವಿಮಾನವನ್ನು ತಜ್ಞರು ಪರಿಶೀಲಿಸಿದ ಬಳಿಕ ವಿಮಾನದ ತಾಂತ್ರಿಕ ಸ್ಥಿತಿಗತಿಯ ಬಗ್ಗೆ ನಿರ್ಧರಿಸಬಹುದು ಎಂದು ಆ್ಯಂಟೊನೊವ್ ಸಂಸ್ಥೆ ಹೇಳಿದೆ.


ವಿಮಾನದ ನಿರ್ವಹಣೆಯ ಹೊಣೆ ಹೊತ್ತಿರುವ ಉಕ್ರೇನ್ ಸರಕಾರದ ರಕ್ಷಣಾ ಸಾಧನಗಳ ಉತ್ಪಾದನಾ ಸಂಸ್ಥೆ ಉಕ್ರೊಬೊರೊನ್ಪ್ರೋಮ್, 3 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಿದ್ದ ಈ ವಿಮಾನವನ್ನು ರಶ್ಯಾದ ವೆಚ್ಚದಲ್ಲಿ ಮತ್ತೆ ನಿರ್ಮಿಸಲಾಗುವುದು . ಇದಕ್ಕೆ ಸುಮಾರು 5 ವರ್ಷ ಬೇಕಾಗಬಹುದು. ಉಕ್ರೇನ್ನ ವಾಯುಯಾನ ಮತ್ತು ವಾಯು ಸರಕು ಸಾರಿಗೆ ಕ್ಷೇತ್ರಕ್ಕೆ ಭಾರೀ ಹಾನಿ ಎಸಗಿರುವ ರಶ್ಯಾ ವಿಮಾನ ಮರುನಿರ್ಮಾಣದ ವೆಚ್ಚವನ್ನು ಭರಿಸಬೇಕು ಎಂದಿದೆ.


ಹೊಸ್ಟೊಮೆಲ್ ವಾಯುನೆಲೆಯಲ್ಲಿ ದುರಸ್ತಿಗಾಗಿ ಈ ವಿಮಾನವನ್ನು ಫೆಬ್ರವರಿ 24ರಂದು ನಿಲ್ಲಿಸಲಾಗಿತ್ತು. ಈ ವಾಯುನೆಲೆಯನ್ನು ರಶ್ಯನ್ ಪಡೆ ವಶಪಡಿಸಿಕೊಂಡಿದೆ. ರಶ್ಯಾದ ಕ್ಷಿಪಣಿ ದಾಳಿಯಿಂದ ತೀವ್ರ ಹಾನಿಗೊಳಗಾದ ವಾಯುನೆಲೆಯ ಒಂದು ಪಾರ್ಶ್ವದಲ್ಲಿ ಈ ವಿಮಾನ ಇತ್ತು. ಸೋವಿಯತ್ ಒಕ್ಕೂಟದ ಯುಗಕ್ಕೆ ಸೇರಿದ್ದ ಈ ಸರಕು ವಿಮಾನ 30 ವರ್ಷಗಳಿಂದ ಸಲ್ಲಿಸುತ್ತಿದ್ದ ಸೇವೆ ದುರಂತ ಅಂತ್ಯ ಕಂಡಿದೆ ಎಂದು ಮೂಲಗಳು ಹೇಳಿವೆ. ಇತರ ದೇಶಗಳಲ್ಲಿ ಬಿಕ್ಕಟ್ಟಿನ ಸಂದರ್ಭ ಏರ್ಲಿಫ್ಟ್ ಕಾರ್ಯಾಚರಣೆಗೆ ಈ ವಿಮಾನವನ್ನು ಬಳಸಲಾಗುತ್ತಿತ್ತು. 2010ರಲ್ಲಿ ಹೈಟಿಯಲ್ಲಿ ಸಂಭವಿಸಿದ ಮಾರಕ ಭೂಕಂಪದ ಸಂತ್ರಸ್ತರಿಗೆ ಈ ವಿಮಾನದ ಮೂಲಕ ಪರಿಹಾರ ಸಾಮಾಗ್ರಿ ರವಾನಿಸಲಾಗಿತ್ತು. ಕೊರೋನ ಸಾಂಕ್ರಾಮಿಕದ ಆರಂಭದ ದಿನದಲ್ಲಿ ಈ ವಿಮಾನವನ್ನು ತುರ್ತು ವೈದ್ಯಕೀಯ ನೆರವು ಒದಗಿಸಲು ಬಳಸಲಾಗುತ್ತಿತ್ತು.


6 ಟರ್ಬೊಫ್ಯಾನ್ ಇಂಜಿನ್ ಹೊಂದಿದ್ದ ಈ ವಿಮಾನ 250 ಟನ್ಗಳಷ್ಟು ಭಾರದ ಸರಕು ಹೊರುವ ಸಾಮರ್ಥ್ಯ ಹೊಂದಿತ್ತು. ಇದು ಅತ್ಯಂತ ವಿಶಾಲ ರೆಕ್ಕೆಗಳನ್ನು ಹೊಂದಿತ್ತು. 1988ರಲ್ಲಿ ಈ ವಿಮಾನವನ್ನು ಪ್ರಥಮ ಬಾರಿಗೆ ಕಾರ್ಯಾಚರಣೆಗೆ ಬಳಸಲಾಗಿತ್ತು. ಮ್ರಿಯಾ ವಿಮಾನದ ದುರಂತ ಅಂತ್ಯಕ್ಕೆ ಹಲವಾರು ಅಭಿಮಾನಿಗಳು ಸಾಮಾಜಿಕ ಮಾಧ್ಯಮದ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News