"ಪ್ರತಿ ದುರಂತವನ್ನೂ 'ಅವಕಾಶ'ಗಳನ್ನಾಗಿ ಬಳಸಬಾರದು": ಕೇಂದ್ರದ ವಿರುದ್ಧ ವರುಣ್‌ ಗಾಂಧಿ ವಾಗ್ದಾಳಿ

Update: 2022-02-28 13:29 GMT
ವರುಣ್‌ ಗಾಂಧಿ

ಹೊಸದಿಲ್ಲಿ: ರಶ್ಯಾ-ಉಕ್ರೇನ್‌ ಸಂಘರ್ಷದಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಯುದ್ಧಗ್ರಸ್ತ ಉಕ್ರೇನ್‌ನಲ್ಲಿ ಸಿಲುಕಿರುವ ಅನೇಕ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆ ತರಲು ವಿಲಂಬವಾಗುತ್ತಿರುವ ಕುರಿತಂತೆ ಬಿಜೆಪಿ ಸಂಸದ ವರುಣ್‌ ಗಾಂಧಿ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಭಾರತ ಸರ್ಕಾರ ನಮಗೆ ಯಾವುದೇ ನೆರವನ್ನೂ ನೀಡಿಲ್ಲ, ನಮ್ಮ ಕರೆಗಳಿಗೂ ರಾಯಭಾರ ಕಛೇರಿ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿರುವ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬಳ ವಿಡಿಯೋವನ್ನು ಟ್ವಿಟರಿನಲ್ಲಿ ಹಂಚಿಕೊಂಡಿರುವ ಸಂಸದ ವರುಣ್‌ ಗಾಂಧಿ, ಪ್ರತಿ ದುರಂತವನ್ನೂ 'ಅವಕಾಶ'ಗಳನ್ನಾಗಿ ಬಳಸಬಾರದೆಂದು, ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದಾರೆ. 

ವರುಣ್‌ ಗಾಂಧಿ ಹಂಚಿರುವ ವಿಡಿಯೋದಲ್ಲಿ, ಭಾರತೀಯ ವಿದ್ಯಾರ್ಥಿನಿಯೊಬ್ಬಳು, “ಭಾರತದ ಸರ್ಕಾರ ತಮ್ಮನ್ನು ಮರಳಿ ಕರೆ ತರಲು 'ಏನನ್ನೂ ಮಾಡುತ್ತಿಲ್ಲ', ನಾವು ರಾಯಭಾರ ಕಛೇರಿ ಸಿಬ್ಬಂದಿಗಳಿಗೆ ಕರೆ ಮಾಡಿದರೆ ಅವರು ಸ್ವೀಕರಿಸುತ್ತಿಲ್ಲ. ರೊಮಾನಿಯಾ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಉಕ್ರೇನ್‌ ಸೈನಿಕರು ಹಲ್ಲೆ ನಡೆಸುವ ವಿಡಿಯೋಗಳನ್ನು ಅವರಿಗೆ ಕಳಿಸಿದರೂ ಯಾವ ಪ್ರತಿಕ್ರಿಯೆಗಳನ್ನು ಅವರು ಕೊಡುತ್ತಿಲ್ಲ. ನಾವು ಉಕ್ರೇನ್‌ ಗಡಿಗಿಂತ 800 ಕಿಮೀ ದೂರದಲ್ಲಿದ್ದೇವೆ, ಅಧಿಕೃತ (ಸರ್ಕಾರಿ) ಸಹಾಯವಿಲ್ಲದಿದ್ದರೆ ಗಡಿ ದಾಟಲು ಸಾಧ್ಯವಿಲ್ಲ, ಆದರೂ ಸರ್ಕಾರ ಏನೂ ಮಾಡುತ್ತಿಲ್ಲ. ನನ್ನ ವಿಡಿಯೋ ನೋಡುತ್ತಿರುವ ಭಾರತೀಯರಲ್ಲಿ ಒಂದು ವಿನಂತಿ, ದಯವಿಟ್ಟು ನೀವು ಭಾರತದ ಮಾಧ್ಯಮಗಳನ್ನು ನಂಬಬೇಡಿ, ಸರ್ಕಾರಕ್ಕೆ ನಮ್ಮನ್ನು ಸುರಕ್ಷಿತವಾಗಿ ಕರೆ ತರುವಂತೆ ಒತ್ತಾಯ ಹೇರಿ” ಎಂದು ಅಳಲು ತೋಡುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.  

ಬಿಜೆಪಿ ಸಂಸದ ವರುಣ್ ಗಾಂಧಿ ಸೋಮವಾರ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸರ್ಕಾರದ ನಿಷ್ಕ್ರಿಯತೆಯಿಂದಾಗಿ ರಷ್ಯಾದ ಆಕ್ರಮಣದ ನಡುವೆ 15,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಇನ್ನೂ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಕೀವ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿನಿ ಭಾರತೀಯ ರಾಯಭಾರ ಕಚೇರಿ ತಮ್ಮ ಸಹಾಯಕ್ಕೆ ಬರುತ್ತಿಲ್ಲ ಎಂದು ಆರೋಪಿಸುತ್ತಿರುವ ವೀಡಿಯೊ ಹಂಚಿಕೊಂಡು “ಬಿಕ್ಕಟ್ಟಿನ ಸಮಯದಲ್ಲಿ ಭಾರತೀಯ ನಾಗರಿಕರಿಗೆ ಸಹಾಯ ಮಾಡುವುದು ಸರ್ಕಾರದ ಕರ್ತವ್ಯ” ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

"(ಸರ್ಕಾರ) ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದ ಕಾರಣ 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಣರಂಗದಲ್ಲಿ ಸಿಲುಕಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ವ್ಯೂಹಾತ್ಮಕ ರಾಜತಾಂತ್ರಿಕತೆಯ ಮೂಲಕ ಅವರನ್ನು ಸುರಕ್ಷಿತವಾಗಿ ಕರೆತರುವುದು ಅವರಿಗೆ ಮಾಡುವ ಸಹಾಯವಲ್ಲ, ಅದು ನಮ್ಮ ಕರ್ತವ್ಯ. ಪ್ರತಿ ದುರಂತಗಳನ್ನು (ಲಾಭದ) ಸಂಧರ್ಭಗಳನ್ನಾಗಿ ನೋಡಬಾರದು” ಎಂದು ವರುಣ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News