ತೆಂಡುಲ್ಕರ್,ದ್ರಾವಿಡ್, ಗವಾಸ್ಕರ್ ಇರುವ ದಿಗ್ಗಜರ ಪಟ್ಟಿಗೆ ಸೇರುವತ್ತ ವಿರಾಟ್ ಕೊಹ್ಲಿ

Update: 2022-03-02 05:32 GMT

ಹೊಸದಿಲ್ಲಿ: ಮೊಹಾಲಿಯಲ್ಲಿ ಮಾರ್ಚ್ 4 ರಂದು ಆರಂಭವಾಗುವ ಭಾರತ ಹಾಗೂ  ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ವಿರಾಟ್ ಕೊಹ್ಲಿ ಪಾಲಿಗೆ ಅತ್ಯಂತ ವಿಶೇಷವಾಗಿದೆ. ಭಾರತದ ಮಾಜಿ ನಾಯಕ ಶುಕ್ರವಾರ 100 ಟೆಸ್ಟ್ ಪಂದ್ಯಗಳನ್ನು ಆಡಿದ 12 ನೇ ಭಾರತೀಯನಾಗಲಿದ್ದಾರೆ.

 ಪ್ರಸ್ತುತ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಬಲಗೈ ಆಟಗಾರನಿಗೆ ಈ ಸಂದರ್ಭವನ್ನು ಇನ್ನಷ್ಟು ವಿಶೇಷವಾಗಿಸಲು ಅವಕಾಶವಿದೆ.  ಟೆಸ್ಟ್ ಕ್ರಿಕೆಟ್ ನಲ್ಲಿ  8,000 ರನ್‌ಗಳನ್ನು ಪೂರೈಸಲು ಕೊಹ್ಲಿಗೆ  ಕೇವಲ 38 ರನ್‌ ಅಗತ್ಯವಿದೆ.  ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸುನೀಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್  ಹಾಗೂ  ವಿವಿಎಸ್ ಲಕ್ಷ್ಮಣ್ ಅವರಂತಹ ಶ್ರೇಷ್ಠರನ್ನು ಒಳಗೊಂಡಿರುವ ಭಾರತದ ದಿಗ್ಗಜರ ಪಟ್ಟಿಗೆ ಸೇರುವ ಆರನೇ ಭಾರತೀಯನಾಗಲು ಕೊಹ್ಲಿ  ಸಿದ್ಧರಾಗಿದ್ದಾರೆ.

ಕೊಹ್ಲಿ ಶ್ರೀಲಂಕಾ ವಿರುದ್ಧ ಭಾರತದ ಮೊದಲ ಇನಿಂಗ್ಸ್‌ನಲ್ಲಿ ಅಗತ್ಯವಿರುವ 38 ರನ್ ಗಳಿಸುವಲ್ಲಿ ಯಶಸ್ವಿಯಾದರೆ ಸಚಿನ್ ತೆಂಡುಲ್ಕರ್ (154 ಇನಿಂಗ್ಸ್), ರಾಹುಲ್ ದ್ರಾವಿಡ್ (158 ಇನಿಂಗ್ಸ್) ವೀರೇಂದ್ರ ಸೆಹ್ವಾಗ್ (160 ಇನಿಂಗ್ಸ್)  ಹಾಗೂ  ಸುನಿಲ್ ಗವಾಸ್ಕರ್ (166 ಇನಿಂಗ್ಸ್)ನಂತರ ವೇಗವಾಗಿ 8,000  ರನ್ ಮೈಲುಗಲ್ಲನ್ನು ತಲುಪಿದ ದೇಶದ ಐದನೇ ಆಟಗಾರ ಎನಿಸಿಕೊಳ್ಳುತ್ತಾರೆ. ಕೊಹ್ಲಿ ಇದುವರೆಗೆ 168 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಬಲಗೈ ಆಟಗಾರ ಕೊಹ್ಲಿ ಪ್ರಸ್ತುತ ರನ್ ಬರ ಎದುರಿಸುತ್ತಿದ್ದಾರೆ.  ನವೆಂಬರ್ 2019 ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಅಂತರರಾಷ್ಟ್ರೀಯ ಶತಕ ಗಳಿಸಿದ್ದರು. 2021 ರಲ್ಲಿ ತವರಿನಲ್ಲಿ ನಡೆದ ಕೊನೆಯ 5 ಟೆಸ್ಟ್‌ಗಳಲ್ಲಿ ಕೊಹ್ಲಿ 26.00 ಸರಾಸರಿಯಲ್ಲಿ ಕೇವಲ 208 ರನ್‌ ಗಳಿಸಿದ್ದಾರೆ. ಅವರು 8 ಇನಿಂಗ್ಸ್‌ಗಳಲ್ಲಿ ಮೂರು ಬಾರಿ ಶೂನ್ಯಕ್ಕೆ  ಔಟಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News