ಉಕ್ರೇನ್: ಇನ್ನೋರ್ವ ಭಾರತೀಯ ವಿದ್ಯಾರ್ಥಿ ಮೃತ್ಯು; ವರದಿ
ಖಾರ್ಕೀವ್: ನಿನ್ನೆಯಷ್ಟೇ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಎಂಬಾತ ರಷ್ಯಾ ಸೈನಿಕರ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದ. ಇದೀಗ ಅದರ ಬೆನ್ನಿಗೇ ಇನ್ನೋರ್ವ ಭಾರತೀಯ ವಿದ್ಯಾರ್ಥಿ ʼಅನಾರೋಗ್ಯದ ಕಾರಣದಿಂದʼ ಉಕ್ರೇನ್ ನ ವಿನ್ನಿಟ್ಸಿಯಾ ನಗರದಲ್ಲಿ ಮೃತಪಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ.
ಪಂಜಾಬ್ ರಾಜ್ಯದ ಬರ್ನಾಲ ಮೂಲದ ಚಂದನ್ ಜಿಂದಾಲ್ ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಅನಾರೋಗ್ಯದ ನಿಮಿತ್ತ ಅವರನ್ನು ಉಕ್ರೇನಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಫೆಬ್ರವರಿ 2 ರಂದು ಪಾರ್ಶ್ವವಾಯುವಿಗೆ ಒಳಗಾಗಿದ್ದ ಚಂದನ್‌ರನ್ನು ಐಸಿಯುಗೆ ದಾಖಲಿಸಲಾಗಿತ್ತು. ಅವರ ತಕ್ಷಣದ ಶಸ್ತ್ರಚಿಕಿತ್ಸೆಗೆ ಅವರ ಪೋಷಕರು ಒಪ್ಪಿಗೆ ನೀಡಿದ್ದರು ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಚಂದನ್ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕುಟುಂಬಕ್ಕೆ ತಲುಪಿದೆ. ಅವರ ತಾಯಿ ಮತ್ತು ಸಹೋದರಿ ಚಂದನ್ ನಿಧನ ಸುದ್ದಿಯಿಂದ ಆಘಾತಕ್ಕೊಳಗಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅಲ್ಲದೇ, ಈ ನಡುವೆ ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿದ್ದು, "ಖಾರ್ಕಿವ್‌ನಲ್ಲಿರುವ ಎಲ್ಲಾ ಭಾರತೀಯ ರಾಷ್ಟ್ರೀಯರಿಗೆ ತುರ್ತು ಸಲಹೆ. ಅವರ ಸುರಕ್ಷತೆ ಮತ್ತು ಭದ್ರತೆಗಾಗಿ ಅವರು ತಕ್ಷಣವೇ ಖಾರ್ಕಿವ್ ಅನ್ನು ತೊರೆಯಬೇಕು." ಎಂದು ಟ್ವೀಟ್ ಮಾಡಿದೆ.
ಉಕ್ರೇನ್‌ನ ಎರಡನೇ ಅತಿ ದೊಡ್ಡ ನಗರವಾಗಿರುವ ಖಾರ್ಕೀವ್‌ನಲ್ಲಿ ರಷ್ಯಾ ಸೇನೆ ತನ್ನ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದರಿಂದ ಖಾರ್ಕೀವ್ ಅನ್ನು ಕೂಡಲೇ ತೊರೆಯುವಂತೆ ಭಾರತ ತನ್ನ ಎಲ್ಲ ಪ್ರಜೆಗಳಿಗೆ ತುರ್ತು ಸಂದೇಶ ರವಾನಿಸಿದೆ.
ಉಕ್ರೇನ್ ರಾಜಧಾನಿಯಲ್ಲಿ ಮಂಗಳವಾರ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಗಿದ್ದ ಭಾರತೀಯ ರಾಯಭಾರಿ ಕಚೇರಿ ಸರಣಿ ಟ್ವೀಟ್ ಮಾಡಿ ಖಾರ್ಕೀವ್ ತೊರೆಯುವಂತೆ ಸಲಹೆ ನೀಡಿದೆ. ಪಿಸೋಚಿನ್, ಬಬಾಯಿ ಅಥವಾ ಬೆಝ್ಲಿಯುಡಿವ್ಕಾದ ಪಟ್ಟಣಗಳಿಗೆ ನಡೆದುಕೊಂಡಾದರೂ ತಲುಪುವಂತೆ ಭಾರತದ ಪ್ರಜೆಗಳಲ್ಲಿ ಸರ್ಕಾರ ಮನವಿ ಮಾಡಿದೆ.
ಸಮೀಪದ ಪಟ್ಟಣ ಪಿಸೋಚಿನ್ 11 ಕಿ.ಮೀ. ದೂರದಲ್ಲಿದೆ. ಭಾರೀ ಶೆಲ್ ದಾಳಿ ನಡೆಯುತ್ತಿರುವುದರಿಂದ ನಡೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಪಾದಿಸಿದ್ದಾರೆ. ಎರಡನೇ ಸಲಹೆ ತುರ್ತು ಪರಿಸ್ಥಿತಿಯನ್ನು ಒತ್ತಿ ಹೇಳಿದೆ. ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸುರಕ್ಷೆಗಾಗಿ ಕೂಡಲೇ ಖಾರ್ಕೀವ್ ಅನ್ನು ತೊರೆಯುವಂತೆ ಅದು ತಿಳಿಸಿದೆ.
ವಾಹನಗಳು ಅಥವಾ ಬಸ್‌ಗಳು ಸಿಗದ ಹಾಗೂ ರೈಲ್ವೆ ನಿಲ್ದಾಣದಲ್ಲಿ ಇರುವ ವಿದ್ಯಾರ್ಥಿಗಳು 11 ಕಿಮೀ ದೂರದಲ್ಲಿರುವ ಪಿಸೋಚಿನ್, 12 ಕಿಮೀ ದೂರದಲ್ಲಿರುವ ಬಬಾಯಿ ಅಥವಾ ಬೆಝಲ್ಲಿಯುಡಿವ್ಕಾಗೆ ನಡೆದುಕೊಂಡು ಹೋಗಬಹುದು ಎಂದು ರಾಯಭಾರಿ ಕಚೇರಿ ತಿಳಿಸಿದೆ.
ರಷ್ಯಾ ನೀಡಿದ ಮಾಹಿತಿ ಆಧಾರದಲ್ಲಿ ಈ ಸಲಹೆಗಳನ್ನು ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. 14 ಲಕ್ಷ ಜನಸಂಖ್ಯೆ ಇರುವ ಯುದ್ಧ ಪೀಡಿತ ಖಾರ್ಕೀವ್‌ನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕೊರತೆಯ ನಡುವೆ ಭಾರತದ ರಾಯಭಾರಿ ಕಚೇರಿ ಈ ಸಲಹೆ ನೀಡಿದೆ.
ನಗರದಲ್ಲಿ ಕೆಲವು ದಿನಗಳಿಂದ ವಾಹನಗಳು ಸಿಗುತ್ತಿಲ್ಲ. ರೈಲು ಹಿಡಿಯುವುದು ಕೂಡ ಅಷ್ಟು ಸುಲಭವಲ್ಲ ಎಂದು ಖಾರ್ಕೀವ್‌ನಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಯೋರ್ವ ಹೇಳಿದ್ದಾನೆ.
URGENT ADVISORY TO INDIAN STUDENTS IN KHARKIV.@MEAIndia @PIB_India @DDNational @DDNewslive pic.twitter.com/2dykst5LDB
— India in Ukraine (@IndiainUkraine) March 2, 2022