ಐಎಸ್‌ಎಸ್‌ಎಫ್‌ನಿಂದ ರಶ್ಯ, ಬೆಲಾರುಸ್ ಕ್ರೀಡಾಳುಗಳಿಗೆ ನಿಷೇಧ

Update: 2022-03-02 18:53 GMT

ಮ್ಯೂನಿಕ್ (ಜರ್ಮನಿ), ಮಾ. 2: ಯುಕ್ರೇನ್ ಮೇಲೆ ರಶ್ಯ ನಡೆಸಿರುವ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಅಂತರ್‌ರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) ರಶ್ಯ ಮತ್ತು ಬೆಲಾರುಸ್‌ನ ಶೂಟರ್‌ಗಳು ತನ್ನ ಪಂದ್ಯಾವಳಿಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ.

ಈಜಿಪ್ಟ್‌ನ ಕೈರೋದಲ್ಲಿ ವಿಶ್ವಕಪ್ ನಡೆಯುತ್ತಿರುವಂತೆಯೇ ಕ್ರೀಡೆಯ ಜಾಗತಿಕ ಆಡಳಿತ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಪಂದ್ಯಾವಳಿಯಲ್ಲಿ ರಶ್ಯದ ಸ್ಪರ್ಧಿಗಳು ಮಂಗಳವಾರದವರೆಗೂ ಸ್ಪರ್ಧಿಸಿದ್ದಾರೆ. ಐಎಸ್‌ಎಸ್‌ಎಫ್‌ನ ಹೇಳಿಕೆಯ ಹಿನ್ನೆಲೆಯಲ್ಲಿ, ಈ ದೇಶಗಳ ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಮುಂದುವರಿಯುವ ಸಾಧ್ಯತೆಯಿಲ್ಲ ಎನ್ನಲಾಗಿದೆ.

‘‘ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಕಾರ್ಯಕಾರಿ ಮಂಡಳಿ ತೆಗೆದುಕೊಂಡಿರುವ ನಿರ್ಧಾರ ಹಾಗೂ ಐಒಸಿ ಅಧ್ಯಕ್ಷರೊಂದಿಗೆ ನಡೆಸಿರುವ ಸಭೆಯ ಬಳಿಕ, ಐಎಸ್‌ಎಸ್‌ಎಫ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಲು ರಶ್ಯನ್ ಫೆಡರೇಶನ್ ಮತ್ತು ಬೆಲಾರುಸ್‌ನ ಅತ್ಲೀಟ್‌ಗಳಿಗೆ ಅನುಮತಿ ನೀಡದಿರಲು ಐಎಸ್‌ಎಸ್‌ಎಫ್ ನಿರ್ಧರಿಸಿದೆ’’ ಎಂದು ಐಎಸ್‌ಎಸ್‌ಎಫ್ ತಿಳಿಸಿದೆ.

‘‘ಈ ನಿರ್ಧಾರವು ಭಾರತೀಯ ಕಾಲಮಾನ ಮಾರ್ಚ್ 1ರಂದು ರಾತ್ರಿ 8:30ಕ್ಕೆ ಜಾರಿಗೆ ಬಂದಿದೆ ಹಾಗೂ ಮುಂದಿನ ಸೂಚನೆಯವರೆಗೆ ಚಾಲ್ತಿಯಲ್ಲಿರುತ್ತದೆ’’ ಎಂದು ಅದು ಹೇಳಿದೆ.

ಗಮನಿಸಬೇಕಾದ ಸಂಗತಿಯೆಂದರೆ, ಐಎಸ್‌ಎಸ್‌ಎಫ್‌ನ ಹಾಲಿ ಮುಖ್ಯಸ್ಥರು ಇಬ್ಬರು ರಶ್ಯನ್ನರು- ರಶ್ಯದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗಿರುವ ವ್ಲಾದಿಮಿರ್ ಲಿಸಿನ್ ಅಧ್ಯಕ್ಷರಾದರೆ, ಅಲೆಕ್ಸಾಂಡರ್ ರಟ್ನರ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಅಂತರ್‌ರಾಷ್ಟ್ರೀಯ ಕ್ರೀಡಾಕೂಟಗಳಿಂದ ರಶ್ಯದ ಅತ್ಲೀಟ್‌ಗಳು ಮತ್ತು ಅಧಿಕಾರಿಗಳನ್ನು ಹೊರಗಿಡುವಂತೆ ಜಗತ್ತಿನ ವಿವಿಧ ಕ್ರೀಡಾ ಆಡಳಿತ ಮಂಡಳಿಗಳಿಗೆ ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನೀಡಿರುವ ಸೂಚನೆಗೆ ಅನುಗುಣವಾಗಿ ಐಎಸ್‌ಎಸ್‌ಎಫ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಜಾಗತಿಕ ಕ್ರೀಡಾ ಸ್ಪರ್ಧೆಗಳ ಪರಿಶುದ್ಧತೆಯನ್ನು ಕಾಪಾಡಲು ಹಾಗೂ ಸ್ಪರ್ಧಿಗಳ ಸುರಕ್ಷತೆಗಾಗಿ ಇಂಥ ಕ್ರಮವೊಂದನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಐಒಸಿ ಹೇಳಿದೆ.

ರಶ್ಯ, ಬೆಲಾರುಸ್ ಸ್ಪರ್ಧಿಗಳು ಚೀನಾದಲ್ಲಿ ‘ತಟಸ್ಥ ಅತ್ಲೀಟ್‌ಗಳು’

ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಪ್ಯಾರಾಲಿಂಪಿಕ್ಸ್‌ನಲ್ಲಿ ರಶ್ಯ ಮತ್ತು ಬೆಲಾರುಸ್‌ನ ಸ್ಪರ್ಧಿಗಳು ‘ತಟಸ್ಥ ಅತ್ಲೀಟ್’ಗಳಾಗಿ ಸ್ಪರ್ಧಿಸಲಿದ್ದಾರೆ ಎಂದು ಅಂತರ್‌ರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ ಬುಧವಾರ ಘೋಷಿಸಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಈ ದೇಶಗಳು ವಹಿಸಿರುವ ಪಾತ್ರಗಳ ಹಿನ್ನೆಲೆಯಲ್ಲಿ ಅದು ಈ ನಿರ್ಧಾರವನ್ನು ತೆಗೆದುಕೊಂಡಿದೆ.

2014ರ ಸೋಚಿ ಒಲಿಂಪಿಕ್ಸ್‌ನಲ್ಲಿ ನಡೆದ ಸರಕಾರಿ ಪ್ರಾಯೋಜಿತ ಉದ್ದೀಪನ ದ್ರವ್ಯ ಹಗರಣ ಹಾಗೂ ಬಳಿಕ ಅದನ್ನು ಮುಚ್ಚಿಹಾಕಲು ಮಾಡಿದ ಪ್ರಯತ್ನಗಳಿಗಾಗಿ, ರಶ್ಯದ ಅತ್ಲೀಟ್‌ಗಳು ಈಗಾಗಲೇ ರಶ್ಯನ್ ಪ್ಯಾರಾಲಿಂಪಿಕ್ ಸಮಿತಿ (ಆರ್‌ಪಿಸಿ) ಹೆಸರಿನಲ್ಲಿ ಭಾಗವಹಿಸಬೇಕಾಗಿದೆ.

ಮಾರ್ಚ್ 4ರಂದು ಚಳಿಗಾಲದ ಪ್ಯಾರಾಲಿಂಪಿಕ್ಸ್ ಆರಂಭಗೊಳ್ಳಲಿದ್ದು, ಹೊಸ ನಿರ್ಬಂಧಗಳನ್ನು ಐಪಿಸಿ ಸೇರಿಸಿದೆ. ಆದರೆ, ರಶ್ಯ ಮತ್ತು ಬೆಲಾರುಸ್‌ನ ಕ್ರೀಡಾಳುಗಳನ್ನು ನಿಷೇಧಿಸುವುದರಿಂದ ಅದು ಹಿಂದೆ ಸರಿದಿದೆ. ಉಕ್ರೇನ್ ವಿರುದ್ಧ ರಶ್ಯ ನಡೆಸುತ್ತಿರುವ ಆಕ್ರಮಣಕ್ಕೆ ಬೆಲಾರುಸ್ ನೀಡುತ್ತಿರುವ ಬೆಂಬಲಕ್ಕಾಗಿ ಅದರ ವಿರುದ್ಧವೂ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಪದಕ ಪಟ್ಟಿಯಿಂದ ಎರಡೂ ನಿಯೋಗಗಳನ್ನು ಹೊರಗಿಡಲಾಗುವುದು ಹಾಗೂ ಹಾಲಿ ಪರಿಸ್ಥಿತಿ ಚಾಲ್ತಿಯಲ್ಲಿರುವವರೆಗೆ ಉಭಯ ದೇಶಗಳಲ್ಲಿ ಯಾವುದೇ ಕ್ರೀಡಾಕೂಟಗಳನ್ನು ನಡೆಸಲಾಗುವುದಿಲ್ಲ ಎಂದು ಐಪಿಸಿ ತಿಳಿಸಿದೆ.

ಚಳಿಗಾಲದ ಪ್ಯಾರಾಲಿಂಪಿಕ್ಸ್‌ನಲ್ಲಿ 648 ಅತ್ಲೀಟ್‌ಗಳು ಮತ್ತು 49 ನಿಯೋಗಗಳು ಭಾಗವಹಿಸಲಿದ್ದಾರೆ ಎಂದು ಪ್ಯಾರಾಲಿಂಪಿಕ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ 71 ರಶ್ಯನ್ ಅತ್ಲೀಟ್‌ಗಳು ಮತ್ತು ಉಕ್ರೇನ್‌ನ 20 ಅತ್ಲೀಟ್‌ಗಳು ಭಾಗವಹಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News