×
Ad

ನಮ್ಮ ಕಷ್ಟಕ್ಕೆ ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳು ನೆರವಾಗಿಲ್ಲ: ನಿಯಮ್ ರಾಘವೇಂದ್ರ

Update: 2022-03-03 22:27 IST

ಉಡುಪಿ, ಮಾ.3: ಯುದ್ಧಗ್ರಸ್ಥ ಉಕ್ರೇನಿನಿಂದ ಸುರಕ್ಷಿತವಾಗಿ ಹೊರಬರಲು ನಾವು ವಿದ್ಯಾರ್ಥಿಗಳು ಸಾಕಷ್ಟು ಸಾಹಸ ಮಾಡಬೇಕಾಯಿತು. ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳು ನಮ್ಮ ಕಷ್ಟಕಾಲದಲ್ಲಿ ಯಾವುದೇ ನೆರವು ನೀಡಿಲ್ಲ ಎಂದು ಇಂದು ಸ್ವದೇಶಕ್ಕೆ ಮರಳಿದ ನಿಯಮ್ ರಾಘವೇಂದ್ರ ತಿಳಿಸಿದ್ದಾರೆ.

ಉಕ್ರೇನಿನ ವಿನ್ನಿಸ್ಟಿಯಾ ನಗರದಲ್ಲಿರುವ ವಿನ್ನಿಸ್ಟಿಯಾ ನ್ಯಾಶನಲ್ ಪಿರೊಗೊವ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಓದುತ್ತಿರುವ ನಿಯಮ್ ರಾಘವೇಂದ್ರ, ರೊಮೆನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಮುಂಬೈ ಮಾರ್ಗವಾಗಿ ಗುರುವಾರ ಹೊಸದಿಲ್ಲಿ ತಲುಪಿದ್ದಾರೆ. ಅವರ ತಂದೆ ಬಿ.ವಿ.ರಾಘವೇಂದ್ರ ಹೊಸದಿಲ್ಲಿ ಕರ್ನಾಟಕ ಭವನದ ವ್ಯವಸ್ಥಾಪಕರಾಗಿದ್ದಾರೆ. ಮಣಿಪಾಲ ಸಮೀಪದ ಪರ್ಕಳದಲ್ಲಿ ವಾಸವಾಗಿದ್ದಾರೆ.

ವಿನ್ನಿಸ್ಟಿಯಾ ನಗರದಲ್ಲಿ ಯುದ್ಧದ ತೀವ್ರತೆ ಇರಲಿಲ್ಲ. ಆದರೆ ಅಲ್ಲಿಂದ ರೊಮೆನಿಯಾ ಗಡಿಯವರೆಗೂ ಹೋಗಲು ಸಾಕಷ್ಟು ಸಾಹಸ ಮಾಡಿದ್ದೇವೆ ಎಂದು ಅವರು ಯುದ್ಧ ಪ್ರಾರಂಭಗೊಂಡ ಬಳಿಕ ತಮ್ಮ ಆತಂಕ, ನೋವು, ಕಷ್ಟಗಳನ್ನು ನೆನಪಿಸಿಕೊಳ್ಳುತ್ತಾ ನುಡಿದರು.

ನಾವಿದ್ದ ನಗರದಿಂದ ರೊಮೆನಿಯಾ ಗಡಿಯವರೆಗೂ ತಲುಪಲು ಯಾವೊಬ್ಬ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಯೂ ಸಹಾಯ ಮಾಡಿಲ್ಲ. ಗೆಳೆಯರು ಸೇರಿಕೊಂಡು ಖಾಸಗಿ ಬಸ್ ವ್ಯವಸ್ಥೆಯಲ್ಲಿ ರೊಮೆನಿಯಾ ಗಡಿವರೆಗೂ ಬಂದೆವು. ಅಲ್ಲಿ ಸಹ ನಮ್ಮ ಸಹಾಯಕ್ಕೆ ಯಾರೂ ಬರಲಿಲ್ಲ ಎಂದು ಅವರು ಹೊಸದಿಲ್ಲಿಯಿಂದ ಮಾತನಾಡುತ್ತಾ ತಿಳಿಸಿದರು.

ಒಂದು ದೇಶದಿಂದ ಇನ್ನೊಂದು ದೇಶದ ಗಡಿ ದಾಟುವ ಬಗ್ಗೆಯೂ ನಮಗೆ ಮಾಹಿತಿ ನೀಡುವವರು ಇರಲಿಲ್ಲ. ರೊಮೆನಿಯಾ ಗಡಿಯಿಂದ ವಿಮಾನ ನಿಲ್ದಾಣದ ಸುತ್ತಲು ಹೆಚ್ಚಿನ ಟ್ರಾಫಿಕ್ ಇದ್ದುದ್ದರಿಂದ ಪ್ರತಿಕೂಲ ಹವಾಮಾನ ದಲ್ಲೂ(ಮೈಕೊರೆವ ಚಳಿ) 12 ಕಿ.ಮೀ ನಡೆದುಕೊಂಡೇ ಹೋಗಬೇಕಾಯಿತು ಎಂದು ನೋವಿನಿಂದ ವಿವರಿಸಿದರು.

ಭವಿಷ್ಯದ ಬಗ್ಗೆ ಕೇಳಿದಾಗ, ಎಲ್ಲವೂ ತಿಳಿಯಾದ ಮೇಲೆ ಮತ್ತೆ ಅಲ್ಲಿಗೆ ತೆರಳಿ ಓದು ಪೂರ್ಣಗೊಳಿಸುವ ಇಚ್ಛೆಯಿದೆ. ಅಲ್ಲಿ ಶಿಕ್ಷಣ ತುಂಬಾ ಚೆನ್ನಾಗಿದೆ ಎಂದ ನಿಯಮ್, ಎಂಬಿಬಿಎಸ್ ಕೋರ್ಸ್‌ನ್ನು ಆನ್‌ಲೈನ್‌ನಲ್ಲಿ ಕಲಿಯಲು ಸಾಧ್ಯವಿಲ್ಲ. ಮಾ.13ರ ಅನಂತರ ಆನ್‌ಲೈನ್ ತರಗತಿ ಆರಂಭವಾಗಲಿದೆ ಎಂದು ಮಾಹಿತಿಯಿದೆ. ಆದರೆ ಈ ಬಗ್ಗೆ ಸ್ಪಷ್ಟತೆಯಿಲ್ಲ ಎಂದರು.

ನಿಯಮ್ ರಾಘವೇಂದ್ರ (20) ಮಣಿಪಾಲದ ಮಾಧವ ಕೃಪಾದಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ಶಿಕ್ಷಣ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News