ಪರಮಾಣು ಕಾರ್ಯಕ್ರಮದ ಬಗ್ಗೆ ಇರಾನ್‌ನ ಸ್ಪಷ್ಟನೆ ಪಡೆಯುವ ಪ್ರಯತ್ನ ಕೈಬಿಡುವುದಿಲ್ಲ: ವಿಶ್ವಸಂಸ್ಥೆ

Update: 2022-03-03 18:46 GMT
ಇರಾನ್‌

ವಿಯೆನ್ನಾ, ಮಾ.3: ಈ ಹಿಂದೆ ಇರಾನ್‌ ಹಲವು ಅಘೋಷಿತ ಸ್ಥಳಗಳಲ್ಲಿ ಪರಮಾಣು ಕಚ್ಛಾವಸ್ತು ಸಂಗ್ರಹವಿದ್ದ ಬಗ್ಗೆ ಇರಾನ್ನಿಂದ ಸ್ಪಷ್ಟನೆ ಪಡೆಯುವ ಪ್ರಯತ್ನವನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ವಿಶ್ವಸಂಸ್ಥೆಯ ಪರಮಾಣು ಕಾರ್ಯಕ್ರಮ ನಿಗಾ ಸಮಿತಿ ಹೇಳಿದೆ.

ಈ ನಿಟ್ಟಿನಲ್ಲಿ ವಿಯೆನ್ನಾ ಮೂಲದ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಮಿತಿಯ ಪ್ರಧಾನ ನಿರ್ದೇಶಕ ರಫೀಲ್ ಗ್ರಾಸಿ ಈ ವಾರಾಂತ್ಯ ಇರಾನ್ಗೆ ಭೇಟಿ ನೀಡಿ ಅಲ್ಲಿನ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ ವಿಯೆನ್ನಾಕ್ಕೆ ವಾಪಾಸು ಬಂದು ಸುದ್ದಿಗೋಷ್ಟಿ ನಡೆಸಲಿದ್ದಾರೆ ಎಂದು ಸಮಿತಿಯ ವಕ್ತಾರರು ಹೇಳಿದ್ದಾರೆ.
ಆದರೆ ಈ ವಿಷಯವನ್ನು ಇಲ್ಲಿಗೇ ಬಿಟ್ಟರೆ, 2015ರ ಪರಮಾಣು ಒಪ್ಪಂದಕ್ಕೆ ಪುನರುಜ್ಜೀವನ ನೀಡುವ ಕುರಿತು ಜಾಗತಿಕ ಶಕ್ತಿಗಳೊಂದಿಗೆ ನಡೆಯುತ್ತಿರುವ ಮಾತುಕತೆಗೆ ನೆರವಾಗಲಿದೆ ಎಂದು ಇರಾನ್ ಹೇಳಿದೆ. ವಿಯೆನ್ನಾದಲ್ಲಿ ನಡೆಯುತ್ತಿರುವ ಮಾತುಕತೆ ಅತ್ಯಂತ ನಿರ್ಣಾಯಕ ಘಟ್ಟದಲ್ಲಿದ್ದು ಮುಂದಿನ ಕೆಲದಿನಗಳು ಅದರ ಫಲಿತಾಂಶವನ್ನು ನಿರ್ಣಯಿಸಲಿವೆ ಎಂದುಮಾಧ್ಯಮಗಳು ವರದಿ ಮಾಡಿವೆ. ಇರಾನ್ ಪರಮಾಣು ಕಾರ್ಯಕ್ರಮದ ಕುರಿತು ಜಂಟಿ ಸಮಗ್ರ ಕ್ರಿಯಾ ಯೋಜನೆ ರೂಪಿಸುವ ನಿಟ್ಟಿನಲ್ಲಿ ವಿಯೆನ್ನಾದಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಬ್ರಿಟನ್, ಚೀನಾ, ಫ್ರಾನ್ಸ್, ಜರ್ಮನಿ, ರಶ್ಯಾ ಮತ್ತು ಇರಾನ್ನ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಅಮೆರಿಕ ಪರೋಕ್ಷವಾಗಿ ಸಭೆಯಲ್ಲಿ ಪಾಲ್ಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News