×
Ad

ಸಿಬಿಐಗೆ ಒಪ್ಪಿಗೆಯನ್ನು ಹಿಂಪಡೆದ 9ನೇ ರಾಜ್ಯ ಎನಿಸಿಕೊಂಡ ಮೇಘಾಲಯ

Update: 2022-03-04 12:44 IST

ಹೊಸದಿಲ್ಲಿ: ಮೇಘಾಲಯ ರಾಜ್ಯವು ಸಿಬಿಐಗೆ ಒಪ್ಪಿಗೆಯನ್ನು ಹಿಂಪಡೆದಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಹೆಜ್ಜೆ ಇಟ್ಟಿರುವ  ಒಂಬತ್ತನೇ ರಾಜ್ಯ ಎನಿಸಿಕೊಂಡಿದೆ.

ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಬಿಜೆಪಿಯ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಭಾಗವಾಗಿದ್ದರೂ ಈ ಕ್ರಮ ಕೈಗೊಂಡಿದೆ.

ಮಿಝೋರಾಂ ಹೊರತುಪಡಿಸಿ, ಸಿಬಿಐಗೆ ಒಪ್ಪಿಗೆಯನ್ನು ಹಿಂತೆಗೆದುಕೊಂಡ ಎಲ್ಲಾ ರಾಜ್ಯಗಳು ವಿರೋಧ ಪಕ್ಷಗಳ ಆಳ್ವಿಕೆಯಲ್ಲಿವೆ.

“ಮೇಘಾಲಯವು  ಸಿಬಿಐಗೆ ಒಪ್ಪಿಗೆ ಹಿಂಪಡೆದಿರುವುದು ನಿಜ. ಕಾರಣಗಳು ನಮಗೆ ತಿಳಿದಿಲ್ಲ”ಎಂದು ಸರಕಾರಿ ಅಧಿಕಾರಿಯೊಬ್ಬರು ಹೇಳಿದರು.

ಇದಕ್ಕೂ ಮೊದಲು ಮಿಝೋರಾಂ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ ಹಾಗೂ  ಕೇರಳ ರಾಜ್ಯಗಳು ಕೇಂದ್ರ ತನಿಖಾ ಸಂಸ್ಥೆಗೆ ಒಪ್ಪಿಗೆಯನ್ನು ಹಿಂಪಡೆದಿದ್ದವು. ಒಪ್ಪಿಗೆಯನ್ನು ಹಿಂಪಡೆಯುವುದರಿಂದ ರಾಜ್ಯ ಸರಕಾರದ ಅನುಮತಿಯಿಲ್ಲದೆ ರಾಜ್ಯದಲ್ಲಿ ಯಾವುದೇ ಪ್ರಕರಣವನ್ನು ತನಿಖೆ ಮಾಡಲು ಸಿಬಿಐಗೆ ಸಾಧ್ಯವಾಗುವುದಿಲ್ಲ.

2015 ರಲ್ಲಿ ಸಿಬಿಐಗೆ ಒಪ್ಪಿಗೆಯನ್ನು  ಹಿಂಪಡೆದ ಮೊದಲ ರಾಜ್ಯ ಮಿಝೋರಾಂ. ಆ ಸಮಯದಲ್ಲಿ ರಾಜ್ಯವು ಕಾಂಗ್ರೆಸ್ ಆಳ್ವಿಕೆಯಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News