ದಿಲ್ಲಿಯಲ್ಲಿ ಕ್ರೈಸ್ತ ಪ್ಯಾಸ್ಟರ್ ಮೇಲೆ ಹಲ್ಲೆಗೈದು 'ಜೈಶ್ರೀರಾಮ್' ಹೇಳುವಂತೆ ಬಲವಂತಪಡಿಸಿದ ಗುಂಪು: ಆರೋಪ
ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ಫತೇಹಪುರಿ ಬೆರ್ರಿ ಪ್ರದೇಶದಲ್ಲಿ ಫೆಬ್ರವರಿ 25ರಂದ ನಡೆದ ಘಟನೆಯಲ್ಲಿ ಕ್ರೈಸ್ತ ಪ್ಯಾಸ್ಟರ್ ಒಬ್ಬರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ಗುಂಪೊಂದು ಜೈ ಶ್ರೀ ರಾಮ್ ಹೇಳುವಂತೆ ಅವರನ್ನು ಬಲವಂತಪಡಿಸಿದೆಯೆಂದು ಆರೋಪಿಸಲಾಗಿದೆ. ಅಕ್ರಮವಾಗಿ ಮತಾಂತರ ನಡೆಸುತ್ತಿದ್ದಾರೆಂಬ ಆರೋಪ ಹೊರಿಸಿ ಗುಂಪು ಪ್ಯಾಸ್ಟರ್ ಮೇಲೆ ದೌರ್ಜನ್ಯವೆಸಗಿದೆ ಎಂದು ಆರೋಪಿಸಲಾಗಿದ್ದು ಸಂತ್ರಸ್ತ ಪಾದ್ರಿ ಎರಡು ದಿನಗಳ ನಂತರ ಮೈದಾನ ಗರ್ಹಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆದರೆ ಈ ಕುರಿತು ಇನ್ನೂ ಎಫ್‍ಐಆರ್ ದಾಖಲಿಸಲಾಗಿಲ್ಲ, ದೂರುದಾರನ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಫೆಬ್ರವರಿ 27ರಂದು ಹೇಳಿದ್ದರೂ ಮಾಧ್ಯಮಗಳು ಘಟನೆಯ ವರದಿ ಮಾಡಿದ ನಂತರ ಮರುದಿನ ಎಫ್‍ಐಆರ್ ದಾಖಲಿಸಲಾಗಿದೆ.
ಈ ಘಟನೆಯ ವೀಡಿಯೋವನ್ನು ಪತ್ರಕರ್ತೆಯೊಬ್ಬರು ಹಂಚಿಕೊಂಡಿದ್ದು ಅದರಲ್ಲಿ ಪಾದ್ರಿ (ಪ್ಯಾಸ್ಟರ್) ಕೆಲೊಂ ಟೆಟ್ ಅವರನ್ನು ವಿಭಾಜಕಕ್ಕೆ ಕಟ್ಟಿ ಹಾಕಿ ಗುಂಪೊಂದು ಅವರನ್ನು ಪ್ರಶ್ನಿಸುತ್ತಿರುವುದು ಕಾಣಿಸುತ್ತದೆ.
ಪ್ಯಾಸ್ಟರ್ ಟೆಟ್ (35) ದಕ್ಷಿಣ ದಿಲ್ಲಿಯ ಅಸೋಲ ಪ್ರದೇಶದಲ್ಲಿ ಕಳೆದ 18 ವರ್ಷಗಳಿಂದ ವಾಸವಾಗಿದ್ದು 15 ವರ್ಷಗಳ ಹಿಂದೆ ಕೂಡ ಸಂಜಯ್ ಕಾಲನಿಯಲ್ಲಿ ಅಪರಿಚಿತ ಗುಂಪೊಂದು ತಮ್ಮನ್ನು ಟಾರ್ಗೆಟ್ ಮಾಡಿತ್ತು ಎಂದು ಹೇಳಿದ್ದಾರೆ.
ಫೆಬ್ರವರಿ 25ರಂದು ಪ್ಯಾಸ್ಟರ್ ತಮ್ಮ ಸ್ನೇಹಿತರೊಬ್ಬರನ್ನು ಭೇಟಿಯಾಗಿ ಮರಳುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಅವರನ್ನು ತಡೆದು ಅವರಲ್ಲಿದ್ದ ಬೈಬಲ್ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಸೆಳೆದು ಮತಾಂತರ ಆರೋಪ ಹೊರಿಸಿತ್ತೆಂದು ಆರೋಪಿಸಲಾಗಿದೆ. ನಂತರ ಅವರನ್ನು ಒದೆದು ಅವರನ್ನು ಠಾಣೆಗೆ ಕರೆದೊಯ್ಯುವುದಾಗಿ ಹೇಳಿ ಕಾರಿನಲ್ಲಿ ಕರೆದುಕೊಂಡು ನೇರವಾಗಿ ಫತೇಹಪುರ್ ಚೌಕ್ ಪ್ರದೇಶಕ್ಕೆ ಹೋಗಿ ಅಲ್ಲಿ ಅವರ ಕೈಗಳನ್ನು ಕಟ್ಟಿ ಹಾಕಿ ರಸ್ತೆ ಬದಿ ಹಲ್ಲೆ ನಡೆಸಲಾಗಿದೆ. ಸುಮಾರು 100 ಮಂದಿ ಅಲ್ಲಿ ಮೂಕಪ್ರೇಕ್ಷಕರಾಗಿ ನಿಂತಿದ್ದರು ಯಾರೂ ಸಹಾಯಕ್ಕೆ ಬಂದಿರಲಿಲ್ಲ ಎಂದು ಪ್ಯಾಸ್ಟರ್ ದೂರಿದ್ದಾರೆ.