ರಶ್ಯಾದ ಮಿಗ್ ಯುದ್ಧ ವಿಮಾನ ಖರೀದಿ ಆದೇಶ ರದ್ದುಗೊಳಿಸಿದ ಭಾರತ: ಅಮೆರಿಕ ಹೇಳಿಕೆ

Update: 2022-03-05 04:23 GMT

ವಾಷಿಂಗ್ಟನ್, ಮಾ.4: ರಶ್ಯಾದಿಂದ ಮಿಗ್-29 ಯುದ್ಧವಿಮಾನ, ಹೆಲಿಕಾಪ್ಟರ್ ಹಾಗೂ ಟ್ಯಾಂಕ್ ವಿರೋಧಿ ಆಯುಧಗಳ ಖರೀದಿಗೆ ಸಂಬಂಧಿಸಿದ ಕಾರ್ಯಾದೇಶ(ಆರ್ಡರ್)ವನ್ನು ಭಾರತ ರದ್ದುಗೊಳಿಸಿರುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ರಶ್ಯಾದ ಬ್ಯಾಂಕ್ ಗಳ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧದಿಂದಾಗಿ ರಶ್ಯಾದಿಂದ ಶಸ್ತ್ರಾಸ್ತ್ರ ಖರೀದಿಸಲು ಇತರ ದೇಶಗಳಿಗೆ ಸಮಸ್ಯೆಯಾಗಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ (ದಕ್ಷಿಣ ಮತ್ತು ಮಧ್ಯ ಏಶ್ಯಾ ವ್ಯವಹಾರಕ್ಕೆ ಸಂಬಂಧಿಸಿದ) ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಹೇಳಿರುವುದಾಗಿ ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಅಮೆರಿಕದ ಈ ಹೇಳಿಕೆಗೆ ಭಾರತದ ವಿದೇಶ ವ್ಯವಹಾರ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಶ್ಯಾದಿಂದ 21 ಜೆಟ್ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆಗೆ 2020ರಲ್ಲಿ ಭಾರತದ ರಕ್ಷಣಾ ಇಲಾಖೆಯ ಸಮಿತಿ ಅನುಮೋದನೆ ನೀಡಿತ್ತು. ಯುದ್ಧವಿಮಾನಗಳ ಪೂರೈಕೆಗೆ ಭಾರತದ ವಾಯುಪಡೆ ಟಂಡರ್ ಕೋರಿಕೆ ಸಲ್ಲಿಸಿದ್ದು ಇದಕ್ಕೆ ಪ್ರತಿಯಾಗಿ ರಶ್ಯಾ ಟೆಂಡರ್ ಸಲ್ಲಿಸಿದೆ. ಇದೀಗ ಭಾರತದ ವಾಯುಪಡೆಯ ಪರಿಶೀಲನೆಯಲ್ಲಿದೆ ಎಂದು ರಶ್ಯಾದ ರಕ್ಷಣಾ ಪಡೆಯ ಅಧಿಕಾರಿಗಳು 2021ರ ಜುಲೈಯಲ್ಲಿ ಹೇಳಿದ್ದರು.
ರಶ್ಯಾದಿಂದ ಎಸ್-400 ಕ್ಷಿಪಣಿ ಖರೀದಿಸುವ 5.43 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ 2018ರಲ್ಲಿ ಭಾರತ ಸಹಿ ಹಾಕಿತ್ತು. ಆದರೆ ಭಾರತದ ವಿರುದ್ಧ ಸಿಎಎಟಿಎಸ್ಎ (ನಿರ್ಬಂಧದ ಕಾಯ್ದೆಯ ಮೂಲಕ ಅಮೆರಿಕದ ವಿರೋಧಿಗಳನ್ನು ಎದುರಿಸುವುದು) ಕಾಯ್ದೆಯನ್ನು ವಿಧಿಸುವುದರಿಂದ ಆಗ ಅಮೆರಿಕ ಹಿಂದೆ ಸರಿದಿತ್ತು. ಇದೀಗ ವಿಶ್ವಸಂಸ್ಥೆಯಲ್ಲಿ ರಶ್ಯಾದ ಪರ ನಿಂತಿರುವ ಭಾರತದ ವಿರುದ್ಧ ಮತ್ತೆ ಸಿಎಎಟಿಎಸ್ಎ ಕಾಯ್ದೆ ಜಾರಿಯಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಡೊನಾಲ್ಡ್ ಲುಲು, ಮನ್ನಾ ಅಥವಾ ಜಾರಿಯ ವಿಷಯದಲ್ಲಿ ಅಧ್ಯಕ್ಷ ಜೋ ಬೈಡನ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.
ನಿಬರ್ಂಧ ಮನ್ನಾ ಅಥವಾ ಜಾರಿಯ ವಿಷಯದಲ್ಲಿ ಅಧ್ಯಕ್ಷರು ಅಥವಾ ಕಾರ್ಯದರ್ಶಿಯ ನಿರ್ಧಾರವನ್ನು ನಾವು ಪೂರ್ವಭಾವಿಯಾಗಿ ನಿರ್ಧರಿಸಲು ಸಾಧ್ಯವಿಲ್ಲ. ಅಥವಾ ಉಕ್ರೇನ್ ಮೇಲಿನ ರಶ್ಯಾದ ಆಕ್ರಮಣಕ್ಕೆ ಈ ನಿರ್ಧಾರ ಸಂಬಂಧಿಸಿದೆಯೇ ಎಂಬುದನ್ನೂ ಹೇಳಲಾಗದು . ಭಾರತ ಈಗಾಗಲೇ ಮಿಗ್-29 ಸಹಿತ ರಶ್ಯಾದೊಂದಿಗಿನ ಹಲವು ಒಪ್ಪಂದಗಳನ್ನು ರದ್ದು ಮಾಡಿದೆ ಎಂದು ಡೊನಾಲ್ಡ್ ಲು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News