×
Ad

ಪಾಣಕ್ಕಾಡ್‌ ಸೈಯದ್‌ ಹೈದರಲಿ ಶಿಹಾಬ್‌ ತಂಙಳ್‌ ನಿಧನ

Update: 2022-03-06 12:53 IST

ಎರ್ನಾಕುಳಂ: ಕೇರಳದ ಇಸ್ಲಾಮಿಕ್‌ ವಿದ್ವಾಂಸ, ಮುಖಂಡ ಹಾಗೂ ಹಿರಿಯ ರಾಜಕೀಯ ನಾಯಕ ಪಾಣಕ್ಕಾಡ್‌ ಹೈದರಲಿ ಶಿಹಾಬ್‌ ತಂಙಳ್‌ (74) ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಕೇರಳ ಮತ್ತು ಹೊರ ರಾಜ್ಯಗಳಲ್ಲೂ ಸಾವಿರಾರು ರಾಜಕೀಯ, ಸಮುದಾಯ ಮತ್ತು ಆಧ್ಯಾತ್ಮಿಕ ಮುಖಂಡರಿಗೆ ಆತ್ಮೀಯರಾಗಿದ್ದ ಅವರು ಕೆಲವು ದಿನಗಳಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ರವಿವಾರ ಮಧ್ಯಾಹ್ನ ಅಂಗಮಾಲಿ ಲಿಟಲ್ ಫ್ಲವರ್ ಆಸ್ಪತ್ರೆಯಲ್ಲಿ ನಿಧನರಾದರು.

ಜೂನ್ 15, 1947 ರಂದು ಪಾಣಕ್ಕಾಡ್‌ನ ಕೊಡಪ್ಪನಕ್ಕಲ್‌ನಲ್ಲಿ ಜನಿಸಿದ ಅವರು ದಿವಂಗತ ಮಾಳಿಯೆಕ್ಕಲ್ ಸೈಯದ್ ಅಹ್ಮದ್ ಪೂಕೋಯ ತಂಙಳ್ (ಪಿಎಂಎಸ್‌ಎ ಪೂಕೋಯ ತಂಙಲ್) ಮತ್ತು ಮರಿಯಮ್ ಚೆರಿಂಞಿ ಬೀವಿಯವರ ಮೂರನೇ ಪುತ್ರರಾಗಿದ್ದರು. ಶಂಸುಲ್ ಉಲಮಾ ಇ.ಕೆ.ಅಬೂಬಕರ್ ಮುಸ್ಲಿಯಾರ್, ಕೊಟ್ಟುಮಲ ಅಬೂಬಕರ್ ಮುಸ್ಲಿಯಾರ್, ಎ.ಪಿ.ಮುಹಮ್ಮದ್ ಮುಸ್ಲಿಯಾರ್ ಮುಂತಾದವರೊಂದಿಗೆ ವಿದ್ಯಾಭ್ಯಾಸ ಪಡೆದಿದ್ದರು. 

2008ರಲ್ಲಿ ಅವರು ಸಮಸ್ತದ ಮುಶಾವರಾ ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು. ಅಕ್ಟೋಬರ್ 2, 2010 ರಂದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಆಗಸ್ಟ್ 1, 2009 ರಂದು ಸೈಯದ್ ಮುಹಮ್ಮದಲಿ ಶಿಹಾಬ್ ತಂಙಳ್ ಅವರ ಮರಣದ ನಂತರ, ಹೈದರ್ ಅಲಿ ಶಿಹಾಬ್‌ ತಂಙಳ್ ಅವರು ಮುಸ್ಲಿಂ ಲೀಗ್‌ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು.‌ ಪಾಣಕ್ಕಾಡ್ ಕುಟುಂಬದವರು ಮುಸ್ಲಿಂ ಲೀಗ್‌ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದು ಹಿಂದಿನಿಂದಲೂ ನಡೆದು ಬಂದ ರೂಢಿಯಾಗಿತ್ತು. ಶಿಹಾಬ್ ತಂಙಳ್ ಲೀಗ್‌ನ ರಾಜ್ಯಾಧ್ಯಕ್ಷರಾದ ನಂತರ ಹೈದರ್ ಅಲಿ ತಂಙಳ್ ಮಲಪುರಂ ಜಿಲ್ಲಾ ಲೀಗ್‌ನ ನಾಯಕತ್ವಕ್ಕೆ ಬಡ್ತಿ ಪಡೆದರು. ಹಲವಾರು ಮಹಲ್ಲ್‌ಗಳ ಖಾಝಿಯಾಗಿದ್ದ ಅವರು ಪಟ್ಟಿಕಾಡ್ ಜಾಮಿಯಾ ನೂರಿಯಾ, ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯ, ಕಡಮೇರಿ ರಹ್ಮಾನಿಯಾ ಅರೇಬಿಕ್ ಕಾಲೇಜು ಮತ್ತು ನಂದಿ ದಾರುಸ್ಸಲಾಮ್ ಅರೇಬಿಕ್ ಕಾಲೇಜು ಸೇರಿದಂತೆ ನೂರಾರು ಧಾರ್ಮಿಕ ಮತ್ತು ಲೌಕಿಕ ಸಂಸ್ಥೆಗಳ ಅಧ್ಯಕ್ಷರಾಗಿದ್ದರು.

ಅವರು 1977 ರಲ್ಲಿ ಪುಲ್ಪಟ್ಟಾ ಪಂಚಾಯತ್‌ನ ಪೂಕೊಳತ್ತೂರು ಮೊಹಲ್ಲಾ ಮತ್ತು ಮದ್ರಸದ ಅಧ್ಯಕ್ಷರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.  ಕೇರಳದಲ್ಲಿ ಅತಿ ಹೆಚ್ಚು ಸಂಖ್ಯೆಯ ಧಾರ್ಮಿಕ ಮತ್ತು ಭೌತಿಕ ಕಾಲೇಜುಗಳು ಮತ್ತು ಅನಾಥಾಶ್ರಮಗಳ ಚುಕ್ಕಾಣಿ ಹಿಡಿಯುವ ಅದೃಷ್ಟವೂ ಅವರಿಗೆ ಸಿಕ್ಕಿತು.

ಪೊನ್ನಾನಿ ಮೌನತುಲ್ ಇಸ್ಲಾಂ ಅರೇಬಿಕ್ ಕಾಲೇಜಿನಲ್ಲಿ ಅಲ್ಪಕಾಲ ವ್ಯಾಸಂಗ ಮಾಡಿದರು. ಬಳಿಕ ಪಟ್ಟಿಕಾಡ್‌ನ ಜಾಮಿಯಾ ನೂರಿಯಾ ಅರೇಬಿಕ್ ಕಾಲೇಜಿಗೆ ಸೇರಿಕೊಂಡು 1974 ರಲ್ಲಿ ಮೌಲವಿ ಫಾಝಿಲ್ ಫೈಝಿ ಪದವಿ ಸ್ವೀಕರಿಸಿದ ಅವರು, 1973 ರಲ್ಲಿ, ವಿದ್ಯಾರ್ಥಿ ಸಂಘಟನೆಯಾದ ಸಮಸ್ತ ಎಸ್‌ಎಸ್‌ಎಫ್‌ನ ಮೊದಲ ಅಧ್ಯಕ್ಷರಾಗಿ ನೇಮಕಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News