"ಪ್ರಧಾನಿಯ ಪ್ರಚಾರಕ್ಕಾಗಿ ಶಾಲಾಮಕ್ಕಳಿಗೆ ರವಿವಾರವೂ ಸಮವಸ್ತ್ರ ಧರಿಸುವ ಶಿಕ್ಷೆ": ಸಾಮಾಜಿಕ ತಾಣದಾದ್ಯಂತ ವ್ಯಂಗ್ಯ

Update: 2022-03-06 09:49 GMT
photo/twitter

ಪುಣೆ: ಮೆಟ್ರೋ ನಿಲ್ದಾಣ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಪುಣೆಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ವಿದ್ಯಾರ್ಥಿಗಳೊಂದಿಗೆ ತೆಗೆದುಕೊಂಡಿರುವ ಫೋಟೋ ಸಾಮಾಜಿಕ ತಾಣದಾದ್ಯಂತ ವ್ಯಂಗ್ಯಕ್ಕೆ ತುತ್ತಾಗಿದೆ.

ಪುಣೆ ಮೆಟ್ರೋ ರೈಲು ಯೋಜನೆಗೆ ರವಿವಾರ ಚಾಲನೆ ನೀಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಶಾಲಾ ಮಕ್ಕಳೊಂದಿಗೆ ಪುಣೆ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಪ್ರಚಾರಕ್ಕಾಗಿ ವಿದ್ಯಾರ್ಥಿಗಳಿಗೆ ರವಿವಾರವೂ ಸಮವಸ್ತ್ರ ಧರಿಸುವ ಶಿಕ್ಷೆ ಎಂದು ನೆಟ್ಟಿಗರು ಟ್ರಾಲ್‌ ಮಾಡುತ್ತಿದ್ದಾರೆ.

ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನೆಟ್ಟಾ ಡಿಸೋಜಾ ಈ ಕುರಿತು ಟ್ವೀಟ್‌ ಮಾಡಿದ್ದು, ಮೋದಿ ಸ್ವಯಂ ಪ್ರಚಾರಕ್ಕಾಗಿ ರವಿವಾರ ಸ್ಪಷಲ್‌ ಕ್ಲಾಸ್‌ ಮಾಡಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರಧಾನಿಯವರು ಇಂತಹ ವಿಷಯಗಳಲ್ಲಿ ತೊಡಗಿರುವುದು ಮುಜುಗರದ ಸಂಗತಿ. ರವಿವಾರದಂದು ಯಾವ ರೀತಿಯ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದನ್ನೆಲ್ಲಾ ನಿಲ್ಲಿಸಿ. ಈ ಅರ್ಥಹೀನ ನಾಟಕಗಳನ್ನು ಮಾಡಲು ಯಾರು ಅವರಿಗೆ ಸಲಹೆ ನೀಡುತ್ತಾರೆ? ಇದು ನಿಜವಾಗಿಯೂ ಮೂರ್ಖತನವಾಗಿದೆ ಎಂದು ಆಶಿಶ್‌ ಕೆ ಮಿಶ್ರಾ ಬರೆದಿದ್ದಾರೆ.

“ಮೋದಿಜಿಯವರು ರವಿವಾರ ಶಾಲೆಗೆ ಹೋಗಿದ್ದರಿಂದ ನಮಗೆ ಮೋದಿಜಿಯವರ ಹಳೆಯ ಸಹಪಾಠಿಗಳನ್ನು ಹುಡುಕಲು ಸಾಧ್ಯವಾಗಲಿಲ್ಲ” ಎಂದು @abhijeet_dipke ಎಂಬವರು ಟ್ವೀಟ್‌ ಮಾಡಿದ್ದಾರೆ.  ರವಿವಾರದಂದು ಶಾಲಾ ಮಕ್ಕಳೊಂದಿಗೆ ಶಾಲಾ ಸಮವಸ್ತ್ರದಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿದ ದೇಶದ ಮೊದಲ ಪ್ರಧಾನಿ ನೀವು ಎಂದು ಸುಶ್ಮಿತಾ ಮಜುಂದಾರ್‌ ಟ್ವೀಟ್‌ ಮಾಡಿದ್ದಾರೆ.

ಚಿತ್ರದಲ್ಲಿ ಪ್ರಧಾನಿ ಮೋದಿ ಮಾಸ್ಕ್‌ ಧರಿಸದೆ ಇರುವುದನ್ನು ಕೂಡಾ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News