ಮುಡಿಪು- ಮೂಳೂರು ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳದಿದ್ದರೆ ಸಚಿವರ ಕಚೇರಿಯೆದುರು ಧರಣಿ: ಯು.ಟಿ.ಖಾದರ್ ಎಚ್ಚರಿಕೆ
ಕೊಣಾಜೆ, ಮಾ.6: ಮುಡಿಪು-ಮೂಳೂರು-ಮಂಚಿ ರಸ್ತೆ ಅಭಿವೃದ್ಧಿಗೆ ಹಿಂದೆ ಹತ್ತು ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದ್ದು, ನಮ್ಮ ಸರಕಾರ ಹೋದ ಬಳಿಕ ಕೆಲಸ ಸ್ಥಗಿತಗೊಂಡಿದೆ. ಶೀಘ್ರ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಸಚಿವರ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಶಾಸಕ, ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಎಚ್ಚರಿಸಿದ್ದಾರೆ.
ಮುಡಿಪುವಿನಿಂದ ನವೋದಯ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರವಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕ್ಷೇತ್ರ ಉದ್ದಗಲಕ್ಕೂ ಅತ್ಯುತ್ತಮ ರಸ್ತೆ ನಿರ್ಮಾಣಗೊಳ್ಳಬೇಕು, ಕಟ್ಟಕಡೆಯ ಗ್ರಾಮದವರೂ ಕೇವಲ ಮೂವತ್ತು ನಿಮಿಷಗಳಲ್ಲಿ ಮಂಗಳೂರು ತಲುಪಬೇಕು ಎನ್ನುವ ನೆಲೆಯಲ್ಲಿ ಎಲ್ಲ ರಸ್ತೆಗಳನ್ನು ಅಗಲೀಕರಣಗೊಳಿಸಲಾಗಿದೆ. ಉಳಿದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮುಡಿಪು ಮೂಳೂರು ರಸ್ತೆ ಕಾಮಗಾರಿ ಶೀಘ್ರ ಪೂರ್ತಿಗೊಳಿಸುವಂತೆ ಇಂಜಿನಿಯರ್ ಗಳಿಗೆ ಸೂಚನೆ ನೀಡಲಾಗಿದ್ದು, ಕೆಲವು ದಿನ ನೋಡಿ ಬಳಿಕ ಕೆಆರ್ ಐಡಿಬಿ ಸಂಬಂಧಪಟ್ಟ ಸಚಿವ ಮುರುಗೇಶ್ ನಿರಾಣಿಯವರ ಕಚೇರಿಯೆದುರು ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಶಾಂತ್ ಕಾಜವ, ಉಪಾಧ್ಯಕ್ಷ ನಾಸಿರ್ ನಡುಪದವು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಅರುಣ್ ಡಿಸೋಜ, ಜಿಪಂ ಮಾಜಿ ಸದಸ್ಯೆ ಮಮತಾ ಗಟ್ಟಿ, ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಡಾಕ್ಟರ್ ಸೆಲ್ ಅಧ್ಯಕ್ಷೆ ಡಾ.ಸುರೇಖಾ, ಕಾರ್ಮಿಕ ಘಟಕದ ಅಧ್ಯಕ್ಷ ಅಬ್ದುರ್ರಹ್ಮಾನ್ ತೋಟಾಲ್, ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ದಿನೇಶ್ ಮೂಳೂರು, ಬಾಳೆಪುಣಿ ಗ್ರಾಪಂ ಸದಸ್ಯ ಶರೀಫ್ ಚೆಂಬೆತೋಟ, ನರಿಂಗಾನ ಗ್ರಾಪಂ ಸದಸ್ಯ ಮುರಳೀಧರ ಶೆಟ್ಟಿ ಮೋರ್ಲ, ಪ್ರತಾಪ್ ಕರ್ಕೇರ, ಬಶೀರ್ ಮುಡಿಪು ಇನ್ನಿತರರು ಉಪಸ್ಥಿತರಿದ್ದರು.