×
Ad

ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕರಿಗೆ ಮರಾಟಿ ಸಮಾಜ ಸೇವಾ ಸಂಘದಿಂದ ಸನ್ಮಾನ

Update: 2022-03-06 22:11 IST

ಪುತ್ತೂರು: ಸಾಧನೆಯ ಬೆನ್ನು ಹತ್ತಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗೆ ನಾಯ್ಕರಿಗೆ ಸಿಕ್ಕಿದ ಪ್ರಶಸ್ತಿ ಮರಾಠಿ ಹಾಗೂ ಕೃಷಿಕ ಸಮಾಜಕ್ಕೆ ನೀಡಿದ ಗೌರವ. ಈ ನಿಟ್ಟಿನಲ್ಲಿ ಅವರು ಮುಂದಿನ ಪೀಳಿಗೆಗೆ ಸಾಧನೆಯ ಕುರಿತ ಜೀವಂತ ಪುಸ್ತಕ ಆಗಿ ಹೊರಹೊಮ್ಮಲಿ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ರವಿವಾರ ಕೊಂಬೆಟ್ಟು ಮರಾಠಿ ಸಮಾಜ ಮಂದಿರದಲ್ಲಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಭಾರತ ಸರಕಾರದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅಮೈ ಪದ್ಮಶ್ರೀ ಮಹಾಲಿಂಗ ನಾಯ್ಕರಿಗೆ ಆಯೋಜಿಸಿದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾಯಕಯೋಗಿ, ಬುಡಕಟ್ಟು ಜನಾಂಗವನ್ನು ಗುರುತಿಸಿ ಈ ಜನಾಂಗದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮೂಲಕ ಮರಾಠಿ ಸಮುದಾಯದ ಮಹಾಲಿಂಗ ನಾಯ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಕೆಲಸವನ್ನು ಪ್ರಧಾನಿಯವರು ಮಾಡಿದ್ದಾರೆ ಎಂದ ಅವರು, ಸರಕಾರದ ಸವಲತ್ತು, ತನ್ನಲ್ಲಿರುವ ಚೈತನ್ಯ ಇವೆರಡನ್ನು ಒಟ್ಟುಗೂಡಿಸಿ ಸಾಧನೆ ಮಾಡಿ ಮತ್ತಷ್ಟು ಸಾಧಕರು ಸಮಾಜದಲ್ಲಿ ಹುಟ್ಟಿಬರಬೇಕು ಎಂಬ ಸಂದೇಶವನ್ನು ಅಮೈ ಮಹಾಲಿಂಗ ನಾಯ್ಕರು ಸಮಾಜಕ್ಕೆ ನೀಡಿದ್ದಾರೆ ಎಂದರು.

ಶಾಸಕ ಸಂಜೀವ ಮಠಂದೂರು ಮಹಾಲಿಂಗ ನಾಯ್ಕರಿಗೆ ಪೇಟ ತೊಡಿಸಿ, ಸನ್ಮಾನಪತ್ರ, ಶ್ರೀ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಮೂರ್ತಿ, ಫಲಪುಷ್ಪ, ನಗದು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಹಾಲಿಂಗ ನಾಯ್ಕ ಪತ್ನಿ ಲಲಿತಾ ಜತೆಗಿದ್ದರು. ಬಳಿಕ ತಾಲೂಕು ಮರಾಠಿ ಸಮುದಾಯದ ಪದಾಧಿಕಾರಿಗಳು, ಗ್ರಾಮೀಣ ಸಮಿತಿ, ಭಜನಾ ಸಮಿತಿ ಸೇರಿದಂತೆ ಇನ್ನಿತರ ಸಮಾಜದ ಸಂಘ ಸಂಸ್ಥೆಗಳು ಮಹಾಲಿಂಗ ನಾಯ್ಕರನ್ನು ಗೌರವಿಸಿದವು.

ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಶಕುಂತಲಾ ಟಿ. ಶೆಟ್ಟಿ ಮಾತನಾಡಿ, ಕರಾವಳಿಯ ಜೀವನಾಡಿ ಕೃಷಿಯನ್ನು ನೆಚ್ಚಿಕೊಂಡು ಸಾಧನೆಯ ಬೆನ್ನೇರಿ ಹೋದ ಮಹಾಲಿಂಗ ನಾಯ್ಕರಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಲಭಿಸಿರುವುದು ಸಮಾಜಕ್ಕೆ ಸಂದ ಗೌರವ. ಅವರ ಕೃಷಿ ಕಾಯಕ ಇನ್ನಷ್ಟು ಉತ್ತಮವಾಗಿ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಸುದ್ದಿ ಸಮೂಹ ಸಂಸ್ಥೆಯ ಸಂಪಾದಕ ಡಾ.ಯು.ಪಿ.ಶಿವಾನಂದ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪ್ಪ ನಾಯ್ಕ ಎಸ್. ವಹಿಸಿದ್ದರು.

ಕಾರ್ಯಕ್ರಮದ ಮೊದಲು ಪದ್ಮಶ್ರೀ ಮಹಾಲಿಂಗ ನಾಯ್ಕ ಅವರನ್ನು ದರ್ಬೆ ವೃತ್ತದ ಬಳಿಯಿಂದ ತೆರದ ವಾಹನದಲ್ಲಿ ನಗರದಲ್ಲಿ ಮೆರವಣಿಗೆ ನಡೆಸಿ ಸಭಾಭವನ ಸ್ಥಳಕ್ಕೆ ಕರೆತರಲಾಯಿತು. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಸನ್ಮಾನ ಸಮಿತಿ ಸಂಚಾಲಕ ಮಂಜುನಾಥ ಎನ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ದುಗ್ಗಪ್ಪ ಎನ್. ಸನ್ಮಾನ ಪತ್ರ ವಾಚಿಸಿದರು. ಸನ್ಮಾನ ಸಮಿತಿ ಸಂಚಾಲಕ ಮಹಾಲಿಂಗ ನಾಯ್ಕ ಸ್ವಾಗತಿಸಿದರು. ಶ್ಯಾಮ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News