×
Ad

ಯುದ್ಧ ಭೂಮಿಯಲ್ಲಿ ವಿದ್ಯಾರ್ಥಿಗಳು

Update: 2022-03-07 00:05 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಉಕ್ರೇನ್‌ನಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಳು ಹತ್ತು ಹಲವು ಜೀರ್ಣಿಸಿಕೊಳ್ಳಲಾಗದ ವಾಸ್ತವಗಳನ್ನು ಭಾರತದ ಮುಂದೆ ತೆರೆದಿಡುತ್ತಿದ್ದಾರೆ. ಅವರ ಮಾತುಗಳನ್ನು ತಡೆಯುವುದಕ್ಕೆ ಸರಕಾರ ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸುತ್ತಿದೆಯಾದರೂ, ಸಾಮಾಜಿಕ ಮಾಧ್ಯಮಗಳ ಮೂಲಕ ಅದು ಜನರನ್ನು ತಲುಪತೊಡಗಿವೆ. ಮುಖ್ಯವಾಗಿ ಭಾರತದಲ್ಲಿ ನಮ್ಮ ಶ್ರೀಸಾಮಾನ್ಯರ ಪಾಲಿಗೆ ವೈದ್ಯಕೀಯ ಶಿಕ್ಷಣ ಹೇಗೆ ಮರೀಚಿಕೆಯಾಗುತ್ತಿದೆ ಎನ್ನುವ ಅಂಶ ಇದೀಗ ಚರ್ಚೆಗೆ ಬಂದಿದೆ. ಭಾರತದಲ್ಲಿ ವೈದ್ಯಕೀಯ ಸೀಟುಗಳ ವರ್ಗೀಕರಣದ ವಿಷಯಕ್ಕೆ ಬಂದಾಗ ಇಲ್ಲಿ ಸ್ತರಗಳ ನಡುವೆ ಸ್ತರಗಳಿವೆ. ಭಾರತದ 300 ವೈದ್ಯಕೀಯ ಕಾಲೇಜುಗಳು ಪ್ರತಿ ವರ್ಷ 30 ಸಾವಿರದಿಂದ-35 ಸಾವಿರದಷ್ಟು ಪದವೀಧರರನ್ನು ಉತ್ಪಾದಿಸುತ್ತಿವೆ. ಆದರೆ ಪ್ರತಿ ವರ್ಷವೂ ಒಂದು ಲಕ್ಷ ವೈದ್ಯರನ್ನು ಉತ್ಪಾದಿಸಬೇಕಾದರೆ 500 ನೂತನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಅಗತ್ಯವಿದೆ. ಭಾರತದಲ್ಲಿ ವೈದ್ಯರು ಹಾಗೂ ರೋಗಿಯ ನಡುವಿನ ಅನುಪಾತ 1:1655 ಆಗಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಈ ಅನುಪಾತವು 1: 1000 ಇರಬೇಕಾಗಿದ್ದು, ಭಾರತದಲ್ಲಿ ವೈದ್ಯರ ಕೊರತೆ ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಸರಕಾರವು ಇದಕ್ಕೆ ಪರಿಹಾರ ಸೂತ್ರವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ವೈದ್ಯ-ರೋಗಿಗಳ ನಡುವೆ ಅಗತ್ಯವಿರುವ ಅನುಪಾತವನ್ನು ತಲುಪುವ ಗುರಿಯನ್ನು ಇರಿಸಿಕೊಂಡಿದೆ. ಇದಕ್ಕಾಗಿ ದೇಶದ ಒಟ್ಟಾರೆ ವೈದ್ಯಕೀಯ ಶಿಕ್ಷಣದ ಬಗ್ಗೆ ಮರುವಿಮರ್ಶೆ ಮಾಡಬೇಕಾದ ಅಗತ್ಯವಿದೆ. ಭಾರತದಲ್ಲಿ ಒಟ್ಟು 88,120 ಮಂದಿ ಎಂಬಿಬಿಎಸ್ ಹಾಗೂ 27,498 ವೈದ್ಯಕೀಯ ಸೀಟುಗಳು ಲಭ್ಯವಿವೆ ಎಂದು ಕೇಂದ್ರ ಆರೋಗ್ಯ ಸಚಿವರು 2021ರ ಡಿಸೆಂಬರ್‌ನಲ್ಲಿ ಸಂಸತ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದರು. ಇದಕ್ಕೆ ಹೋಲಿಸುವುದಾದರೆ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್)ಗೆ 10.60 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. 2020ರಲ್ಲಿ ಆ ಸಂಖ್ಯೆ 10.30 ಲಕ್ಷ ಆಗಿತ್ತು.

ಸರಕಾರಿ ಸೀಟುಗಳಿಂದ ವಂಚಿತರಾದ ಆರ್ಥಿಕ ಹಾಗೂ ಸಾಮಾಜಿಕ ಹಿಂದುಳಿದವರಿಗೆ ಯೋಗ್ಯ ದರದಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡಲು ಖಾಸಗಿ ವಲಯವು ಗಮನಹರಿಸಬಹುದಾಗಿದೆ. ಆದರೆ ಖಾಸಗಿ ವಲಯ ಬೇರೆಯದೇ ಮಾತನಾಡುತ್ತದೆ. ಮೊದಲನೆಯದಾಗಿ ಉಸಿರುಗಟ್ಟಿಸುವಂತಹ ಕಾನೂನು ನಿಯಮಗಳಿಂದಾಗಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದು ಪ್ರಾಮಾಣಿಕ ಶೈಕ್ಷಣಿಕ ಉದ್ಯಮಿಗಳಿಗೆ ತೀರಾ ದುಸ್ತರವಾಗಿಬಿಟ್ಟಿದೆ. ಇದಕ್ಕಾಗಿ ಒಬ್ಬರಿಗೆ ನೂರಾರು ಕೋಟಿ ಆರಂಭಿಕ ಹೂಡಿಕೆಯ ಅಗತ್ಯವಿರುತ್ತದೆ. ವಾರ್ಷಿಕ ಪರವಾನಿಗೆಯ ಅನುಮೋದನೆ, ವಿವಿಧ ಬೋಧನಾ ವಿಭಾಗಗಳ ಸ್ಧಾಪನೆಯ ಅಗತ್ಯ, ನಿರ್ದಿಷ್ಟ ಸಂಖ್ಯೆಯ ಹಾಸಿಗೆಗಳೊಂದಿಗೆ ಆಸ್ಪತ್ರೆಯ ಸ್ಥಾಪನೆ, ಈಗಾಗಲೇ ಕಾರ್ಯಾಚರಿಸುತ್ತಿರುವ ಕಾಲೇಜುಗಳು/ ಆಸ್ಪತ್ರೆಗಳಿಗೆ ಹೆಚ್ಚುವರಿ ಸೀಟುಗಳು/ಹಾಸಿಗೆಗಳು ಇತ್ಯಾದಿ ಹೆಸರಿಸಲ್ಪಡುವ ಕೆಲವೇ ಅವಶ್ಯಕತೆಗಳಾಗಿವೆ. ಈ ವೆಚ್ಚಗಳನ್ನು ವಿದ್ಯಾರ್ಥಿಗಳಿಂದ ಶುಲ್ಕವಾಗಿ ವಸೂಲಿ ಮಾಡಲಾಗುತ್ತಿದೆ ಎನ್ನುವುದು ಖಾಸಗಿ ಕಾಲೇಜುಗಳ ಅಭಿಮತ.

ಒಬ್ಬ ವಿದ್ಯಾರ್ಥಿಗೆ ಸರಕಾರಿ ವೈದ್ಯಕೀಯ ಕಾಲೇಜ್‌ನಲ್ಲಿ ಸೀಟು ದೊರೆಯಲು ಸಾಧ್ಯವಾಗದೆ, ಖಾಸಗಿ ಕಾಲೇಜುಗಳಿಗೆ ಕೋಟಿಗಟ್ಟಲೆ ಹಣ ಸುರಿಯುವ ಬದಲಿಗೆ ವಿದೇಶಕ್ಕೆ ತೆರಳಿ, ವೈದ್ಯಕೀಯ ಶಿಕ್ಷಣ ಪಡೆಯುವುದು ಭಾರತೀಯರಿಗೆ ಹೆಚ್ಚು ಸುಲಭವೆನಿಸಿದೆ. ಮಧ್ಯಮ ವರ್ಗಗಳ ಕುಟುಂಬಗಳ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಿಗೆ ದೊಡ್ಡ ಮೊತ್ತದ ಹಣವನ್ನು ಪಾವತಿಸಲು ಬೇರೆ ಯಾವುದೇ ಆರ್ಥಿಕ ಮಾರ್ಗೋಪಾಯಗಳಿಲ್ಲ. ವಿದೇಶಗಳಲ್ಲಿ ಶಿಕ್ಷಣದ ವೆಚ್ಚ ಕಡಿಮೆ ಮಾತ್ರವಲ್ಲದೆ, ಸೀಟು ಪಡೆಯುವಲ್ಲಿ ಇಲ್ಲಿರುವಷ್ಟು ಸ್ಪರ್ಧಾತ್ಮಕತೆಯಿಲ್ಲ. ಹಲವಾರು ದೇಶಗಳು ವಿದ್ಯಾರ್ಥಿಗಳಿಗೆ ಅವರ ವೈದ್ಯಕೀಯ ಶಿಕ್ಷಣದ ಜೊತೆಗೆ ಇಂಗ್ಲಿಷ್ ಅಥವಾ ಮಾಂಡರಿನ್ (ಚೀನಿ) ಅಥವಾ ರಶ್ಯ ಹೀಗೆ ಸ್ಥಳೀಯ ಭಾಷೆಗಳ ಕೋರ್ಸ್‌ಗಳನ್ನು ಕೂಡಾ ನೀಡುತ್ತವೆ.

ಜಾಗತೀಕರಣದ ಈ ಯುಗದಲ್ಲಿ ವಿದೇಶಿ ಭಾಷೆ, ದೇಶ ಹಾಗೂ ಸಂಸ್ಕೃತಿಯ ಒಡನಾಟ ಪ್ರಯೋಜನಕಾರಿಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಅಪಾರವಾದ ಶುಲ್ಕವನ್ನು ವಿಧಿಸಲಾಗುತ್ತಿರುವ ಹೊರತಾಗಿಯೂ ಭಾರತದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ತುಂಬಾ ಸುಧಾರಣೆಯಾಗಬೇಕಿದೆ. ಇಲ್ಲಿ ವೈದ್ಯಕೀಯ ಶಿಕ್ಷಣವು ಶಿಕ್ಷಕ ಕೇಂದ್ರಿತ ಕಲಿಕಾ ವಿಧಾನವನ್ನು ಅನುಸರಿಸುತ್ತಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸರಿಸಮಾನವಾದ ಅತ್ಯಾಧುನಿಕ ತಂತ್ರಜ್ಞಾನವನ್ನು ನಿಯೋಜಿಸಲಾಗುತ್ತಿಲ್ಲ. ಭಾರತದಲ್ಲಿ ವೈದ್ಯಕೀಯ ಶಿಕ್ಷಣವು ಈಗಲೂ ವಿದ್ಯಾರ್ಥಿಗಳಿಗೆ ವಿಷಯದ ಕುರಿತ ಸಮಗ್ರ ತಿಳುವಳಿಕೆಯ ಬೋಧನೆಯಲ್ಲಿ ಹಿಂದುಳಿದಿದೆ. ಇವೆಲ್ಲವೂ ಅಂತಿಮವಾಗಿ ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶದ ಮೊರೆಹೋಗುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತಿದೆ.

ಆದುದರಿಂದ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ ವಿದ್ಯಾರ್ಥಿಗಳ ಅನಿವಾರ್ಯತೆಯನ್ನು ಸರಕಾರ ಗಮನಿಸಬೇಕು ಮತ್ತು ದೇಶದಲ್ಲಿ ವೈದ್ಯಕೀಯ ಶಿಕ್ಷಣ ಶ್ರೀಸಾಮಾನ್ಯ ವರ್ಗದ ಬಡವರಿಗೂ ಒದಗುವಂತಿರಬೇಕು. ಇದಕ್ಕೆ ಪೂರಕವಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯವಾಗಿದೆ. ಅತ್ತ ಶಿಕ್ಷಣವೂ ಇಲ್ಲದೆ, ಹೂಡಿದ ಹಣವೂ ಇಲ್ಲದೆ ಅತಂತ್ರವಾಗಿರುವ ಉಕ್ರೇನ್ ವಿದ್ಯಾರ್ಥಿಗಳ ಬಗ್ಗೆ ಸರಕಾರ ಯೋಚಿಸಬೇಕಾಗಿದೆ. ಅವರನ್ನು ತೆರವು ಗೊಳಿಸುವುದರಿಂದಷ್ಟೇ ಹೊಣೆಗಾರಿಕೆ ಮುಗಿಯುವುದಿಲ್ಲ. ಅವರಿಗೆ ಪುನರ್ವಸತಿಯ ವ್ಯವಸ್ಥೆಯೂ ನಡೆಯುವುದು ಅತ್ಯಗತ್ಯ. ಇದು ಭಾರತದ ಭವಿಷ್ಯದ ಆರೋಗ್ಯ ವ್ಯವಸ್ಥೆಗೂ ಅತ್ಯಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಮನದೆಳೆ