ದೇಶದಲ್ಲಿ ಕೋವಿಡ್ ಮೂರನೇ ಅಲೆ ಮುಕ್ತಾಯ: 22 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದ ಪ್ರಕರಣ

Update: 2022-03-07 02:03 GMT
photo: pti

ಹೊಸದಿಲ್ಲಿ: ದೇಶದಲ್ಲಿ ಕಳೆದ ಒಂದು ವಾರದಲ್ಲಿ ವರದಿಯಾದ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ ಭಾರತದಲ್ಲಿ ಮೂರನೇ ಅಲೆ ಮುಕ್ತಾಯವಾಗಿರುವ ಸ್ಪಷ್ಟ ಸೂಚನೆಗಳು ಸಿಕ್ಕಿವೆ. ಕಳೆದ 22 ತಿಂಗಳಲ್ಲೇ ಕನಿಷ್ಠ ಸಾಪ್ತಾಹಿಕ ಪ್ರಕರಣಗಳು ಕಳೆದ ವಾರ ದೇಶದಲ್ಲಿ ವರದಿಯಾಗಿವೆ. 2020ರ ಮೇ ತಿಂಗಳ ಬಳಿಕ ಇಷ್ಟೊಂದು ಕಡಿಮೆ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು.

ಕಳೆದ ನಾಲ್ಕು ವಾರಗಳಲ್ಲಿ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಪ್ರತಿ ವಾರ ಅರ್ಧದಷ್ಟು ಕಡಿಮೆಯಾಗಿದೆ. ಫೆಬ್ರವರಿ 21-27ರ ಅವಧಿಯಲ್ಲಿ ದೇಶದಲ್ಲಿ 86097 ಪ್ರಕರಣಗಳು ವರದಿಯಾಗಿದ್ದವು. ಅದಕ್ಕೂ ಹಿಂದಿನ ಮೂರು ವಾರಗಳಲ್ಲಿ ಅನುಕ್ರಮವಾಗಿ 1.7 ಲಕ್ಷ, 3.9 ಲಕ್ಷ ಮತ್ತು 9.7 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಇದು ಸಾಂಕ್ರಾಮಿಕ ಆರಂಭವಾದ ಬಳಿಕ ಅತಿ ವೇಗದ ಇಳಿಕೆಯಾಗಿದೆ.

ಫೆಬ್ರವರಿ 28- ಮಾರ್ಚ್ 6ಕ್ಕೆ ಕೊನೆಗೊಂಡ ವಾರದಲ್ಲಿ ದೇಶಾದ್ಯಂತ 43000 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಮೂರನೇ ಅಲೆ ಆರಂಭವಾಗುವ ಮುನ್ನ ಇದ್ದ ಸಂಖ್ಯೆಗಿಂತ ಕಡಿಮೆ. ಮೂರನೇ ಅಲೆ ಅರಂಭಕ್ಕೆ ಮುನ್ನ ಅಂದರೆ 2021ರ ಡಿಸೆಂಬರ್ 20-26ರ ಅವಧಿಯಲ್ಲಿ 46,073 ಪ್ರಕರಣಗಳು ವರದಿಯಾಗಿದ್ದವು. ಜತೆಗೆ 2020ರ ಮೇ 18-24ರ ಅವಧಿಯಲ್ಲಿ ದಾಖಲಾದ 40,490 ಪ್ರಕರಣಗಳನ್ನು ಹೊರತುಪಡಿಸಿದರೆ ಕಳೆದ 22 ತಿಂಗಳಲ್ಲೇ ಕನಿಷ್ಠ ಸಂಖ್ಯೆಯ ಪ್ರಕರಣಗಳು ಕಳೆದ ವಾರ ದಾಖಲಾಗಿವೆ.

ದೆಹಲಿಯಲ್ಲಿ ಭಾನುವಾರ ಪಾಸಿಟಿವ್ ಪ್ರಕರಣಗಳು 249ಕ್ಕೆ ಇಳಿದಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 338 ಮಂದಿ ಚೇತರಿಸಿಕೊಂಡಿದ್ದಾರೆ.

ಜಾಗತಿಕವಾಗಿ ಕೋವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ 60 ಲಕ್ಷದ ಅಂಚನ್ನು ತಲುಪಿದೆ. ರಷ್ಯಾದಲ್ಲಿ ಇನ್ನೂ ಸಾಂಕ್ರಾಮಿಕ ಸ್ಥಿತಿ ಗಂಭೀರವಾಗಿದ್ದು, ಕಳೆದ 24 ಗಂಟೆಗಳಲ್ಲಿ 79863 ಪ್ರಕರಣಗಳು ವರದಿಯಾಗಿವೆ. 744 ಮಂದಿ ಜೀವ ಕಳೆದುಕೊಂಡಿದ್ದು, ಒಟ್ಟು ಮೃತರ ಸಂಖ್ಯೆ 3,56,281ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News