×
Ad

ಭಾರತದ ಫೆಲೆಸ್ತೀನ್ ರಾಯಭಾರಿ ಮುಕುಲ್ ಆರ್ಯ ನಿಗೂಢ ಸಾವು

Update: 2022-03-07 08:11 IST

ಹೊಸದಿಲ್ಲಿ: ಫೆಲೆಸ್ತೀನ್ (Palestine)ನಲ್ಲಿ ಭಾರತದ ರಾಯಭಾರಿಯಾಗಿರುವ ಮುಕುಲ್ ಆರ್ಯ (Mukul Arya) ಅವರ ಮೃತದೇಹ ರವಿವಾರ ರಮಲ್ಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಪತ್ತೆಯಾಗಿದೆ. 2008ನೇ ಬ್ಯಾಚ್ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಯಾಗಿರುವ ಆರ್ಯ ಅವರ ಸಾವಿಗೆ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.

ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಅವರು "ಆರ್ಯ ನಿಧನದಿಂದ ತೀವ್ರ ಆಘಾತವಾಗಿದೆ" ಎಂದು ಹೇಳಿಕೆ ನೀಡಿದ್ದಾರೆ.  "ರಮಲ್ಹಾದಲ್ಲಿ ಭಾರತೀಯ ರಾಯಭಾರಿಯಾಗಿರುವ ಮುಕುಲ್ ಆರ್ಯ ಅವರ ಸಾವು ತೀವ್ರ ಆಘಾತ ತಂದಿದೆ" ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಅವರು ಪ್ರತಿಭಾವಂತ ಮತ್ತು ಪ್ರಖರ ಅಧಿಕಾರಿಯಾಗಿದ್ದರು ಎಂದು ಅವರು ಬಣ್ಣಿಸಿದ್ದಾರೆ.

ಮುಕುಲ್ ಆರ್ಯ ಅವರು ಕರ್ತವ್ಯ ಸ್ಥಾನದಲ್ಲೇ ಸಾವಿಗೀಡಾಗಿರುವ ಬಗ್ಗೆ ಫೆಲೆಸ್ತೀನ್ ಆಡಳಿತ ಕೂಡಾ ಆಘಾತ ವ್ಯಕ್ತಪಡಿಸಿದೆ. ಭಾರತದ ರಾಯಭಾರಿ ಆರ್ಯ ಅವರ ಸಾವಿನ ಸುದ್ದಿ ಆಘಾತಕಾರಿ ಎಂದು ಫೆಲೆಸ್ತೀನ್ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.

"ಈ ನೋವಿನ ಸುದ್ದಿ ತಿಳಿದ ತಕ್ಷಣ, ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಹಾಗೂ ಪ್ರಧಾನಿ ಅವರು ಎಲ್ಲ ಭದ್ರತಾ ಸಿಬ್ಬಂದಿ, ಪೊಲೀಸರು ಮತ್ತು ಸಾರ್ವಜನಿಕ ಅಧಿಕಾರಿಗಳಿಗೆ, ಆರೋಗ್ಯ ಮತ್ತು ವಿಧಿವಿಜ್ಞಾನ ಔಷಧಿ ಇಲಾಖೆಯ ಅಧಿಕಾರಿಗಳು ತಕ್ಷಣ ಭಾರತದ ರಾಯಭಾರಿ ನಿವಾಸಕ್ಕೆ ಧಾವಿಸುವಂತೆ ಮತ್ತು ಸಾವಿನ ಪ್ರಕರಣದ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ" ಎಂದು ಸಚಿವಾಲಯ ಹೇಳಿಕೆ ನೀಡಿದೆ.

ಇಂಥ ಕ್ಲಿಷ್ಟಕರ ಮತ್ತು ತುರ್ತು ಸ್ಥಿತಿಯಲ್ಲಿ ಅಗತ್ಯ ನೆರವನ್ನು ನೀಡಲು ಎಲ್ಲರೂ ಸರ್ವಸನ್ನದ್ಧರಾಗಿದ್ದಾರೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಆರ್ಯ ಅವರ ಮೃತದೇಹವನ್ನು ಭಾರತಕ್ಕೆ ಸಾಗಿಸುವ ಸಂಬಂಧ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆ ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿದೆ.

ಫೆಲೆಸ್ತೀನ್ ವಿದೇಶಾಂಗ ಸಚಿವ ರಿಯಾದ್ ಅಲ್ ಮಲಿಕಿ ಅವರು ಆರ್ಯ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಆರ್ಯ ಇದಕ್ಕೂ ಮುನ್ನ ಕಾಬೂಲ್, ಮಾಸ್ಕೊದಲ್ಲಿ ಸೇವೆ ಸಲ್ಲಿಸಿದ್ದರು. ವಿದೇಶಾಂಗ ವ್ಯವಹಾರಗಳ ಕೇಂದ್ರ ಕಚೇರಿಯಲ್ಲೂ ಅವರು ಕರ್ತವ್ಯ ನಿರ್ವಹಿಸಿದ್ದರು. ಐಎಫ್‍ಎಸ್ ಸೇವೆಗೆ ಸೇರುವ ಮುನ್ನ ಅವರು ದೆಹಲಿ ಮತ್ತು ಜೆಎನ್‍ಯುನಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದರು.

ಇದನ್ನೂ ಓದಿ: ರಾಷ್ಟ್ರೀಯ ಭದ್ರತೆ ನೆಲೆಯಲ್ಲಿ ಆರ್ ಟಿ ಐ ಅರ್ಜಿ ತಿರಸ್ಕಾರ ಶೇ. 83ರಷ್ಟು ಹೆಚ್ಚಳ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News