ಚುನಾವಣೋತ್ತರ ಸಮೀಕ್ಷೆ: ಪಂಚರಾಜ್ಯಗಳಲ್ಲಿ ಗೆಲುವು ಯಾರಿಗೆ?

Update: 2022-03-07 16:46 GMT

ಹೊಸದಿಲ್ಲಿ,ಮಾ.7: ಸೋಮವಾರ ಪಂಚರಾಜ್ಯ ವಿಧಾನಸಭಾ ಚುನಾವಣೆಗಳ ಅಂತಿಮ ಹಂತದ ಮತದಾನ ಪೂರ್ಣಗೊಂಡ ಬೆನ್ನಿಗೇ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಲಾಗಿದ್ದು, ಅರವಿಂದ ಕೇಜ್ರಿವಾಲ್ ರ ಆಪ್ ಪಂಜಾಬ್ ನಲ್ಲಿ ಗೆಲುವನ್ನು ಸಾಧಿಸಲಿದೆ ಮತ್ತು ಉ.ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಭವಿಷ್ಯವನ್ನು ನುಡಿದಿವೆ.

ಐದು ಚುನಾವಣೋತ್ತರ ಸಮೀಕ್ಷೆಗಳ ಸರಾಸರಿಯು ಆಪ್ ತನ್ನ ಮೊದಲ ಪ್ರಮುಖ ರಾಜ್ಯ ಪಂಜಾಬ್‌ನಲ್ಲಿ ಗಮನಾರ್ಹ ಗೆಲುವನ್ನು ಸಾಧಿಸಲಿದೆ ಎಂದು ಹೇಳಿದೆ. 117 ಸ್ಥಾನಗಳನ್ನು ಹೊಂದಿರುವ ಪಂಜಾಬ್‌ ವಿಧಾನಸಭೆಯಲ್ಲಿ ಬಹುಮತಕ್ಕೆ 59 ಸ್ಥಾನಗಳು ಅಗತ್ಯವಾಗಿದ್ದು, ಸಮೀಕ್ಷೆಗಳು ಆಪ್ ಗೆ 68 ಸ್ಥಾನಗಳನ್ನು ನೀಡಿವೆ.

2015ರಿಂದಲೂ ದಿಲ್ಲಿಯಲ್ಲಿ ಆಡಳಿತ ನಡೆಸುತ್ತಿರುವ ಆಪ್ ದಿಲ್ಲಿಯಿಂದ ಹೊರಗೆ ತನ್ನ ಅಧಿಕಾರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಹಿಂದಿನ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸಾಧನೆಯ ಬಳಿಕ ಆಪ್ನ ಕನಸು ಹೊಸ ಎತ್ತರಕ್ಕೇರಿತ್ತು. ಈ ಸಲ ಪಕ್ಷವು ಭಗವಂತ ಸಿಂಗ್ ಮಾನ್ ಅವರು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದೂ ಘೋಷಿಸಿತ್ತು.

ಪಂಜಾಬ್‌ನಲ್ಲಿ ತೀವ್ರ ಆಂತರಿಕ ಕಚ್ಚಾಟದ ಪರಿಣಾಮವನ್ನು ಕಾಂಗ್ರೆಸ್ ಅನುಭವಿಸಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ಸೂಚಿಸಿವೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ ಸಿಂಗ್ ಸಿಧು ಅವರು ಪಕ್ಷದ ಹಿರಿಯ ನಾಯಕ ಅಮರಿಂದರ್ ಸಿಂಗ್ ಅವರ ನಿರ್ಗಮನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಬಳಿಕ ಅಮರಿಂದರ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು.

ಪಂಜಾಬ್‌ನಲ್ಲಿ ಬಿಜೆಪಿ ಕಳಪೆ ಪ್ರದರ್ಶನವನ್ನು ತೋರಿಸಲಿದೆ. ಅದು ಮತ್ತು ಅದರ ಮಾಜಿ ಮಿತ್ರಪಕ್ಷ ಅಕಾಲಿ ದಳ ಒಟ್ಟಾಗಿ 18 ಸ್ಥಾನಗಳನ್ನು ಗೆಲ್ಲಲಿವೆ ಎಂದು ಸಮೀಕ್ಷೆಗಳು ಹೇಳಿವೆ.

ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿಯು ಉತ್ತರ ಪ್ರದೇಶದಲ್ಲಿ ಸತತ ಎರಡನೇ ಗೆಲುವನ್ನು ಸಾಧಿಸುವ ಸುಳಿವನ್ನು ಸಮೀಕ್ಷೆಗಳು ನೀಡಿವೆ. ನಾಲ್ಕು ಸಮೀಕ್ಷೆಗಳ ಸರಾಸರಿಯು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ 231 ಮತ್ತು ಅಖಿಲೇಶ್ ಯಾದವರ ಸಮಾಜವಾದಿ ಪಕ್ಷಕ್ಕೆ 140 ಪ್ಲಸ್ ಸ್ಥಾನಗಳನ್ನು ನೀಡಿದೆ. 403 ಸದಸ್ಯ ಬಲದ ಉ.ಪ್ರದೇಶ ವಿಧಾನಸಭೆಯಲ್ಲಿ ಬಹುಮತಕ್ಕೆ 202 ಸ್ಥಾನಗಳು ಅಗತ್ಯವಾಗಿವೆ.

ಉತ್ತರಾಖಂಡದಲ್ಲಿ ನಿಕಟ ಹಣಾಹಣಿಯನ್ನು ಸಮೀಕ್ಷೆಗಳು ನಿರೀಕ್ಷಿಸಿದ್ದು, ಬಿಜೆಪಿ ಕಾಂಗ್ರೆಸ್‌ಗಿಂತ ಅಲ್ಪ ಮುನ್ನಡೆಯನ್ನು ಸಾಧಿಸಬಹುದು. ಆದಾಗ್ಯೂ ಎರಡೂ ಪಕ್ಷಗಳು ಅಧಿಕಾರಕ್ಕೆ ತೀರ ಸನಿಹದಲ್ಲಿವೆ ಎಂದು ಅವು ಹೇಳಿವೆ.

ಗೋವಾದಲ್ಲಿ ನಿಕಟ ಪೈಪೋಟಿಯನ್ನು ಮುನ್ನಂದಾಜಿಸಲಾಗಿದ್ದು,ಬಿಜೆಪಿಗೆ 18 ಮತ್ತು ಕಾಂಗ್ರೆಸ್‌ಗೆ 15 ಸ್ಥಾನಗಳನ್ನು ಸಮೀಕ್ಷೆಗಳು ನೀಡಿವೆ. 40 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ ಬಹುಮತಕ್ಕೆ 21 ಸ್ಥಾನಗಳು ಅಗತ್ಯವಾಗಿವೆ. ಹೀಗಾಗಿ ಗೋವಾದಲ್ಲಿ ಬಹುಮತಕ್ಕೆ ಅಗತ್ಯವಾಗಿರುವ ಶಾಸಕರನ್ನು ಸೆಳೆಯಲು ಮುಂಚೂಣಿ ಪಕ್ಷಗಳ ನಡುವೆ ತೀವ್ರ ಹೋರಾಟದ ಸಾಧ್ಯತೆಯಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಮೂಡಿಬಂದಿತ್ತಾದರೂ ಅಧಿಕಾರಕ್ಕೇರಲು ವಿಫಲಗೊಂಡಿತ್ತು.

ಮಣಿಪುರದಲ್ಲಿ ಹೆಚ್ಚಿನ ಸ್ಥಾನಗಳು ಬಿಜೆಪಿ ಪಾಲಾಗಲಿವೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಬಿಜೆಪಿ 30 ಮತ್ತು ಕಾಂಗ್ರೆಸ್ 14 ಸ್ಥಾನಗಳನ್ನು ಗೆಲ್ಲಬಹುದು ಎಂದು ಅವು ಭವಿಷ್ಯ ನುಡಿದಿವೆ. 60 ಸದಸ್ಯಬಲದ ಮಣಿಪುರ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಸ್ಥಾನಗಳು ಅಗತ್ಯವಾಗಿವೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News