"ಕೃಷಿ ಕಾನೂನುಗಳ ಬಗ್ಗೆ ಮಾತನಾಡದಿದ್ದರೆ ʼರಾಷ್ಟ್ರಪತಿ ಪದವಿʼ ನೀಡುತ್ತೇವೆ ಎಂದಿದ್ದರು": ಸತ್ಯಪಾಲ್‌ ಮಲಿಕ್‌ ಆರೋಪ

Update: 2022-03-07 14:50 GMT

ಹೊಸದಿಲ್ಲಿ: ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರ ಕೇಂದ್ರ ಸರ್ಕಾರ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ರವಿವಾರ ಹೇಳಿದ್ದಾರೆ. ಹಾಗೂ, ಈ ವಿವಾದಾತ್ಮಕ ಕಾನೂನುಗಳ ಬಗ್ಗೆ ಮಾತೆತ್ತುವುದಿಲ್ಲವಾದರೆ ರಾಷ್ಟ್ರಪತಿ ಪದವಿ ನೀಡುವುದಾಗಿಯೂ ನನಗೆ ಆಮಿಷ ಒಡ್ಡಲಾಗಿತ್ತು ಎಂದು ತಿಳಿಸಿದ್ದಾರೆ.

 ಹರ್ಯಾಣದ ಜಿಂಡ್‌ ಜಿಲ್ಲೆಯ ಖಂಡೇಲ ಗ್ರಾಮದ ಖಾಪ್‌ನಲ್ಲಿ ಮಾತನಾಡಿದ ಸತ್ಯಪಾಲ್‌, ರೈತರು ಒಗ್ಗಟ್ಟಾಗಿ 2024 ರಲ್ಲಿ ತಮ್ಮದೇ ಆದ ಸರ್ಕಾರವನ್ನು ರಚಿಸಬೇಕಿದೆ ಎಂದು ಕರೆ ನೀಡಿದ್ದಾರೆ.  
 
ಉತ್ತರ ಪ್ರದೇಶದ ಜಾಟ್‌ ಸಮುದಾಯದ ಪ್ರಮುಖ ನಾಯಕರಾಗಿದ್ದ ಮಲಿಕ್‌,ʼಮುಂದಿನ ಆರೇಳು ತಿಂಗಳಲ್ಲಿ ರಾಜ್ಯಪಾಲರಾಗಿ ನನ್ನ ಅಧಿಕಾರಾವಧಿ ಮುಗಿಯುತ್ತದೆ, ಬಳಿಕ  ಉತ್ತರ ಭಾರತದಾದ್ಯಂತ ರೈತರನ್ನು ಒಗ್ಗೂಡಿಸಲು ಅಭಿಯಾನ ಆರಂಭಿಸುವುದಾಗಿ ತಿಳಿಸಿದ್ದಾರೆ.  ಬಿಜೆಪಿಯೊಂದಿಗೆ ಆಪ್ತವಾಗಿ ಗುರುತಿಸಿಕೊಂಡಿದ್ದ ಸತ್ಯಪಾಲ್ ಇತ್ತೀಚೆಗೆ, ಅದರಲ್ಲೂ ಮೂರು ಕೃಷಿ ಕಾನೂನುಗಳ ವಿವಾದದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣ ಟೀಕೆಯನ್ನು ಮಾಡುತ್ತಿದ್ದಾರೆ. 
 
“(ಪ್ರತಿಭಟನಾ ಅವಧಿಯಲ್ಲಿ) ನಾವು 700 ಕ್ಕೂ ಅಧಿಕ ರೈತರನ್ನು ಕಳೆದುಕೊಂಡಿದ್ದೇವೆ.  ನಾಯಿ ಮರಿ ಸತ್ತಾಗೆಲ್ಲಾ ಪತ್ರ ಬರೆಯುತ್ತಿದ್ದ ಪ್ರಧಾನಿಗೆ ರೈತರ ಸಾವಿಗೆ ಒಂದು ಪದದ ಸಂತಾಪ ಸೂಚಿಸಿಲ್ಲʼ ಎಂದು ಕಿಡಿಕಾರಿದರು. 

ಮೂರು ಕೃಷಿ ಕಾನೂನುಗಳು ತರುವುದಕ್ಕೂ ಮುನ್ನ ಪಾಣಿಪತ್‌ ಬಳಿಯಲ್ಲಿ 50 ಎಕರೆಯ ಗೋದಾಮು ನಿರ್ಮಿಸಿದ್ದ ಪ್ರಧಾನಿಯ ಸ್ನೇಹಿತ ಕಡಿಮೆ ಬೆಲೆಗೆ ಧಾನ್ಯ ಖರೀದಿಸಲು ಯೋಜನೆ ಹಾಕಿಕೊಂಡಿದ್ದ, ಹಾಗಾಗಿ ಕನಿಷ್ಟ ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರ ಹಿಂಜರಿದಿದೆ ಎಂದು ಸತ್ಯಪಾಲ್‌ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News