ತಮಿಳುನಾಡು: ದಲಿತ ವ್ಯಕ್ತಿಯ ಹತ್ಯೆ ಪ್ರಕರಣ; 10 ಮಂದಿ ದೋಷಿಗಳಿಗೆ ಜೀವಾವಧಿ ಶಿಕ್ಷೆ
ಹೊಸದಿಲ್ಲಿ, ಮಾ. 8: ತಮಿಳುನಾಡಿನಲ್ಲಿ 2015ರಲ್ಲಿ ದಲಿತ ವ್ಯಕ್ತಿಯೋರ್ವನನ್ನು ಹತ್ಯೆಗೈದ ಪ್ರಕರಣದಲ್ಲಿ ಮಧುರೈ ವಿಶೇಷ ಸತ್ರ ನ್ಯಾಯಾಲಯ ಮಂಗಳವಾರ 10 ಮಂದಿ ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ 2015ರಲ್ಲಿ ದಲಿತ ವ್ಯಕ್ತಿಯನ್ನು ಹತ್ಯೆಗೈದ ಪ್ರಕರಣದ 17 ಮಂದಿ ಆರೋಪಿಗಳಲ್ಲಿ 10 ಮಂದಿ ದೋಷಿಗಳು ಎಂದು ನ್ಯಾಯಮೂರ್ತಿ ಟಿ. ಸಂಪತ್ಕುಮಾರ್ ಅವರು ಮಾರ್ಚ್ 5ರಂದು ಪ್ರಕಟಿಸಿದ್ದರು.
ಗೌಂಡರ್ ಸಮುದಾಯದ ಮಹಿಳೆಯೊಂದಿಗೆ ಸಂಬಂಧ ಇರಿಸಿರುವ ಶಂಕೆಯಲ್ಲಿ ಗೋಕುಲ್ ರಾಜ್ನನ್ನು ಅಪಹರಿಸಲಾಗಿತ್ತು ಹಾಗೂ ಅನಂತರ ಹತ್ಯೆಗೈಯಲಾಗಿತ್ತು. ಗೋಕುಲ್ರಾಜ್ ಅವರನ್ನು ತಿರುಚೆಂಗೋಡೆ ಅರ್ಥನಾರೀಶ್ವರ ದೇವಾಲಯದಿಂದ 2015 ಜೂನ್ 23ರಂದು ಅಪಹರಿಸಲಾಗಿತ್ತು. ಮುರು ದಿನ ಅವರ ಮೃತದೇಹ ಪಳ್ಳಿಪಾಲಯಂನ ರೈಲು ಹಳಿಯ ಸಮೀಪ ರುಂಡ ಮುಂಡ ಬೇರ್ಪಡಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪ್ರಕರಣದ ಪ್ರಧಾನ ಆರೋಪಿ ಕೊಂಗು ವೆಲ್ಲಲಾರ್ ಜಾತಿಯ ಸಂಘಟನೆಯಾದ ‘ಧೀರನ್ ಚಿನ್ನಮಲೈ ಪೆರವೈ’ ಅಧ್ಯಕ್ಷ ಎಸ್. ಯುವರಾಜ್ಗೆ ಮೂರು ಪ್ರಕರಣಗಳ ಆರೋಪಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇತರ ಐದು ಮಂದಿಗೆ ದುಪ್ಪಟ್ಟು ಜೀವಾವಧಿ ಶಿಕ್ಷೆ ನೀಡಲಾಗಿದೆ. ಮತ್ತಿಬ್ಬರಿಗೆ ಜೀವಾವಧಿ ಶಿಕ್ಷೆ, ಅಲ್ಲದೆ ಐದು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.