×
Ad

​ಅಮೆರಿಕದ ಹಲವು ಬಹುರಾಷ್ಟ್ರೀಯ ಕಂಪನಿಗಳಿಂದ ರಷ್ಯಾ ವಹಿವಾಟು ಸ್ಥಗಿತ

Update: 2022-03-09 08:26 IST

ವಾಷಿಂಗ್ಟನ್; ರಷ್ಯಾ ತೈಲವನ್ನು ಅಮೆರಿಕ ನಿಷೇಧಿಸಿದ ಬೆನ್ನಲ್ಲೇ ಅಮೆರಿಕದ ಕಾರ್ಪೊರೇಟ್ ಶಕ್ತಿಯ ಸಂಕೇತಗಳೆನಿಸಿದ ಮೆಕ್‌ಡೊನಾಲ್ಡ್, ಸ್ಟಾರ್‌ಬಕ್ಸ್, ಕೊಕೊ ಕೋಲಾ, ಪೆಪ್ಸಿಕೊ ಮತ್ತು ಜನರಲ್ ಇಲೆಕ್ಟ್ರಿಕ್‌ನಂಥ ಜಾಗತಿಕ ಬ್ರಾಂಡ್‌ಗಳು ತಕ್ಷಣದಿಂದ ರಷ್ಯಾದಲ್ಲಿ ವಹಿವಾಟು ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿವೆ.

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಖಂಡಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

"ನಮ್ಮ ಮೌಲ್ಯವೆಂದರೆ ಉಕ್ರೇನ್‌ನಲ್ಲಿ ಅನಾವರಣಗೊಂಡಿರುವ ಅನಗತ್ಯ ಮಾನವ ನರಳಿಕೆಯನ್ನು ನಾವು ಕಡೆಗಣಿಸಲಾಗದು" ಎಂದು ಮೆಕ್‌ಡೊನಾಲ್ಡ್ ಅಧ್ಯಕ್ಷ ಮತ್ತು ಸಿಇಓ ಕ್ರಿಸ್ ಕೆಂಪ್‌ಝಿನ್‌ಸ್ಕಿ ಉದ್ಯೋಗಿಗಳಿಗೆ ಬರೆದ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ.

ಚಿಕಾಗೊ ಮೂಲದ ಈ ದೈತ್ಯ ಬರ್ಗರ್ ಸರಣಿ ತಾತ್ಕಾಲಿಕವಾಗಿ ರಷ್ಯಾದಲ್ಲಿರುವ 850 ಮಳಿಗೆಗಳನ್ನು ಮುಚ್ಚಲಿದೆ. ಆದರೆ ರಷ್ಯಾದಲ್ಲಿ ಕೆಲಸ ಮಾಡುತ್ತಿರುವ, ತಮ್ಮ ಹೃದಯ ಮತ್ತು ಆತ್ಮವನ್ನು ಮೆಕ್‌ಡೊನಾಲ್ಡ್‌ಗಾಗಿ ಧಾರೆ ಎರೆದಿರುವ 62 ಸಾವಿರ ಸಿಬ್ಬಂದಿಗೆ ವೇತನ ಮುಂದುವರಿಸಲಿದೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಕಂಪನಿ ಮತ್ತೆ ಯಾವಾಗ ವಹಿವಾಟು ಪುನರಾರಂಭಿಸಲಿದೆ ಎನ್ನುವುದನ್ನು ಹೇಳಲು ಅಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಳೆದ ಶುಕ್ರವಾರ ತನ್ನ 130 ರಷ್ಯನ್ ಮಳಿಗೆಗಳಿಂದ ಬರುವ ಲಾಭವನ್ನು ಉಕ್ರೇನ್‌ನ ಮಾನವೀಯ ಪರಿಹಾರಕ್ಕೆ ದೇಣಿಗೆ ನೀಡುವ ಭರವಸೆ ನೀಡಿದ ಸ್ಟಾರ್ ಬಕ್ಸ್ ಮಂಗಳವಾರ ತನ್ನ ನಿರ್ಧಾರವನ್ನು ಬದಲಿಸಿ ರಷ್ಯಾದಲ್ಲಿ ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಪ್ರಕಟಿಸಿದೆ. ಆದರೆ 2000 ರಷ್ಯನ್ ಉದ್ಯೋಗಿಗಳಿಗೆ ವೇತನ ಮುಂದುವರಿಸುವುದಾಗಿ ಅಧ್ಯಕ್ಷ ಮತ್ತು ಸಿಇಓ ಕೆವಿನ್ ಜಾನ್ಸನ್ ಹೇಳಿದ್ದಾರೆ.

ನ್ಯೂಯಾರ್ಕ್ ಮೂಲದ ಕೊಕೊ ಕೋಲಾ, ಪೆಪ್ಸಿಕೊ ಮತ್ತು ಜನರಲ್ ಇಲೆಕ್ಟ್ರಿಕಲ್ಸ್ ಕೂಡಾ ತಕ್ಷಣದಿಂದ ರಷ್ಯಾದಲ್ಲಿ ವಹಿವಾಟು ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿವೆ. ಆದರೆ 20 ಸಾವಿರ ರಷ್ಯನ್ ಉದ್ಯೋಗಿಗಳು ಮತ್ತು 40 ಸಾವಿರ ರಷ್ಯನ್ ಕೃಷಿ ಕಾರ್ಮಿಕರನ್ನು ರಕ್ಷಿಸುವ ಸಲುವಾಗಿ ಹಾಲು, ಶಿಶು ಉತ್ಪನ್ನಗಳು ಮತ್ತು ಶಿಶು ಆಹಾರದ ವಹಿವಾಟನ್ನು ರಷ್ಯಾದಲ್ಲಿ ಮುಂದುವರಿಸುವುದಾಗಿ ಪೆಪ್ಸಿಕೊ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News